

ಬೆಂಗಳೂರು: ವಿಧಾನ ಪರಿಷತ್ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಚ್ಚರಿ ಅಭ್ಯರ್ಥಿ ಹೆಸರು ಘೋಷಿಸಿದೆ. ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಬೊಟ್ಯಾಡಿ ಪಕ್ಷದ ಉಮೇದುವಾರರಾಗಿದ್ದಾರೆ.
ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಅಧಿಕೃತ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಂಗಳವಾರ ಪ್ರಕಟಿಸಿದ್ದಾರೆ. ಎಬಿವಿಪಿ ಹಿನ್ನೆಲೆಯ ಕಿಶೋರ್ ಕುಮಾರ್ ಬಜರಂಗ ದಳ, ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ, ಇದೀಗ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ಈ ಕ್ಷೇತ್ರ ತೆರವಾಗಿದೆ. ಉಪ ಚುನಾವಣೆ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಈಗಾಗಲೇ ಪ್ರಕಟಿಸಿದೆ. ನಾಮಪತ್ರ ಸಲ್ಲಿಸಲು ಅ.3 ಕೊನೇ ದಿನವಾಗಿದೆ.
ಬಿಜೆಪಿ ಬಾಹುಳ್ಯದ ಈ ಕ್ಷೇತ್ರದಲ್ಲಿ ಅನಾಯಾಸವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಪಕ್ಷದ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳು ತೆರೆಮರೆಯಲ್ಲಿ ಜಿದ್ದಾಜಿದ್ದಿಗೆ ಇಳಿದಿದ್ದರು. ಜಾತಿ, ವರ್ಗದ ಅಸ ಪ್ರಯೋಗಿಸಿ ವಂಚಿತ ಸಮುದಾಯಕ್ಕೆ ಆದ್ಯತೆ ಬೇಡಿಕೆ ಮುಂದೆ ಮಾಡಲಾಗಿತ್ತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಮೋದ ಮಧ್ವರಾಜ್, ಸುರೇಶ್ ನಾಯ್ಕ, ಉದಯ ಕುಮಾರಶೆಟ್ಟಿ ಹೆಸರುಗಳು ಚರ್ಚೆಯಲ್ಲಿದ್ದವು. ಬಂಟ ಸಮುದಾಯಕ್ಕೆ ಸಾಕಷ್ಟು ಅವಕಾಶ ಲಭಿಸಿದೆ. ಹಿಂದುಳಿದ ವರ್ಗಗಳ ಮೊಗವೀರ (ಗಂಗಾಮತಸ್ಥ), ಬಿಲ್ಲವ ಸಮುದಾಯಗಳಿಗೆ ಕೊಡಿ ಎನ್ನುವ ಒತ್ತಡವೂ ಪಕ್ಷದ ನಾಯಕರ ಮೇಲಿತ್ತು.
ಆಂತರಿಕವಾಗಿ ಜಿದ್ದಾಜಿದ್ದಿ ಮಧ್ಯೆ ಹಿಂದುಳಿದ ವರ್ಗಗಳಲ್ಲಿ ಸಣ್ಣದಾದ ಸವಿತಾ ಸಮುದಾಯದ ಕಿಶೋರ್‌ಕುಮಾರ್ ದಿಢೀರ್ ಮೇಲೆದ್ದಿದ್ದಾರೆ. ಮೇಲ್ನೋಟಕ್ಕೆ ಎಲ್ಲಿಯೂ ಹೆಸರು ಚರ್ಚೆಗೆ ಬಂದಿಲ್ಲ. ಆದರೆ ಸಂಘದ ಒತ್ತಾಸೆ ಕಿಶೋರ್ ಕುಮಾರ್‌ಗೆ ಆಸರೆಯಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರ ಸ್ಪರ್ಧಿಸಲು ಬಯಸಿದ್ದರು ಎಂದು ಮೂಲಗಳು ತಿಳಿಸಿವೆ.