ಮೇಲ್ಮನೆ ಚುನಾವಣೆ: ಆರು ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ತಂತ್ರಗಾರಿಕೆ

BJP MP, MLA, MLC and leaders meeting
Published on

ಬೆಂಗಳೂರು: ವಿಧಾನ ಪರಿಷತ್ ಶಿಕ್ಷಕರ, ಪದವೀಧರರ ಆರು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಲು ಬಿಜೆಪಿ ಕಾರ್ಯತಂತ್ರ ಹೆಣೆದಿದೆ. ಭೌಗೋಳಿಕ ವಿಸ್ತಾರವಾಗಿರುವ ಈ ಕ್ಷೇತ್ರದಲ್ಲಿ ಮತದಾರರ ಒಲವು ಗಿಟ್ಟಿಸಿಕೊಳ್ಳಲು ಹೆಚ್ಚಿನ ಶ್ರಮವಹಿಸಲು ಸೂಚಿಸಿದೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಗೆ ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರ ಕಾರ್ಯಸೂಚಿಯಾಗಿತ್ತು. ಆದರೂ ಇನ್ನುಳಿದ ನಾಲ್ಕು ಕ್ಷೇತ್ರಗಳಿಗೆ ಏಕರೂಪದ ಕಾರ್ಯತಂತ್ರ ವಿಸ್ತರಿಸಲು ನಿರ್ಧರಿಸಿ, ಆಯಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಿಗೆ ಅನುಷ್ಠಾನದ ಜವಾಬ್ದಾರಿ ಒಪ್ಪಿಸಲಾಗಿದೆ.

ಬಿಜೆಪಿ ನಾಲ್ಕು, ಜೆಡಿಎಸ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎನ್ನುವುದನ್ನು ಮುಖಂಡರು, ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು.

ಯಾವುದೇ ಅಸಮಾಧಾನ, ಗೊಂದಲಗಳಿದ್ದರೂ ಕೂಡಲೇ ಬಗೆಹರಿಸಬೇಕು. ಕಷ್ಟಸಾಧ್ಯವೆನಿಸಿದರೆ ರಾಜ್ಯ ನಾಯಕರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟು, ಮೈತ್ರಿಕೂಟ ಮೇಲುಗೈ ಸಾಧಿಸುವುದಕ್ಕೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸಭೆ ಸ್ಪಷ್ಟವಾಗಿ ಸೂಚಿಸಿದೆ.

ಪದವೀಧರ, ಶಿಕ್ಷಕ ಮತದಾರರನ್ನು ಹುಡುಕಿಕೊಂಡ ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಬೂತ್‌ಗೆ ಒಬ್ಬ ಉಸ್ತುವಾರಿಯನ್ನು ನೇಮಿಸಿ, ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸಭೆ ನಿರ್ಧರಿಸಿ, ಕ್ಷೇತ್ರದ ಚುನಾವಣೆ ಉಸ್ತುವಾರಿ ಜತೆಗೆ ಎಲ್ಲರ ಸಹಕರಿಸಬೇಕು ಎಂಬ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಕ್ಷೇತ್ರವಾರು ಸಭೆಗಳು

ಸಭೆಯ ನಂತರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಬೆಂಗಳೂರು ವಿಧಾನ ಪರಿಷತ್ ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಸಿದ್ಧತೆಗೆ ಈ ಸಭೆ ನಡೆಯಿತು.

ಜತೆಗೆ ಇನ್ನುಳಿದ ನಾಲ್ಕು ಕ್ಷೇತ್ರಗಳಿಗೂ ಕಾರ್ಯಚಟುವಟಿಕೆ ರೂಪಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವಿಧಾನಸಭೆ ಕ್ಷೇತ್ರವಾರು ಸಭೆಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಭೌಗೋಳಿಕವಾಗಿ ವಿಶಾಲವಾದ ಕ್ಷೇತ್ರಗಳಲ್ಲಿ ಎಲ್ಲ ಮತದಾರರನ್ನು ತಲುಪಲು ಬೂತ್‌ಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಪ್ರತಿ ಬೂತ್‌ಗೆ ಒಬ್ಬ ಉಸ್ತುವಾರಿ ನೇಮಿಸಿ ಮೇಲ್ವಿಚಾರಣೆ ನಡೆಸಲಾಗುವುದು.

ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸಮನ್ವಯ ಸಾಧಿಸಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಭೆ ಸಲಹೆ ನೀಡಿದೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದಿದ್ದು, ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪ್ರಮುಖರ ಸಭೆ ನಾಳೆ

ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಕ್ಷೇತ್ರಗಳಿಗೆ ಚುನಾವಣೆ ಅಧಿಸೂಚನೆ ಹೊರ ಬಿದ್ದಿದೆ. ಸದಸ್ಯ ಬಲದ ಪ್ರಕಾರ ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಲಿದೆ. ಪಕ್ಷಕ್ಕೆ ಲಭಿಸುವ ಸ್ಥಾನಗಳಿಗೆ ಕಣ್ಣಿಟ್ಟ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ.

ಪಕ್ಷದ ವರಿಷ್ಠರ ಸೂಚನೆಯಂತೆ ಮೂರು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳ ಬಗ್ಗೆ ಚರ್ಚಿಸಿ, ಶಿಾರಸು ಮಾಡಲೆಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ಬುಧವಾರ ಸಂಜೆ 4ಕ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಮಾಜಿ ಸಚಿವರು ಹಾಜರಿರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net