

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗ ಮೇಲ್ಮನೆ ಚುನಾವಣೆಯ ಸವಾಲು ಎದುರಾಗಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅನಿಲ್ಕುಮಾರ್ ರಂಗಪ್ರವೇಶದಿಂದ ಚುನಾವಣೆ ರಂಗುಪಡೆದುಕೊಂಡಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯುವುದರಿಂದ ಕ್ರಾಸ್ ವೋಟ್ ಮಾಡುವುದು ಸುಲಭ. ಸಚಿವ ಸಂಪುಟ ವಿಸ್ತರಣೆಯಿಂದ ಆಗಿರುವ ಅಸಮಾಧಾನದ ಲಾಭ ಪಡೆಯಬೇಕು ಎಂಬುದು ಜೆಡಿಎಸ್ನ ರಣತಂತ್ರವಾಗಿದ್ದು, ಅನಿಲ್ಕುಮಾರ್ ಮೂಲಕ ಬಿಜೆಪಿಗೆ ಚೆಕ್ವೆುಟ್ ಕೊಟ್ಟಿದೆ. ಆದ್ದರಿಂದಲೇ ಮತಗಳು ಚದುರದಂತೆ ಎಚ್ಚರಿಕೆಯ ಹೆಜ್ಜೆ ಇಡುವ ಮೂಲಕ ಸವದಿಯನ್ನು ಗೆಲ್ಲಿಸಬೇಕಾಗಿದೆ.
9 ಮತ ಕ್ರಾಸ್ ಆದರೂ ಸಾಕು: ಬಿಜೆಪಿಯ 9 ಮತ ಕ್ರಾಸ್ ಆದರೂ ಸವದಿ ಗೆಲುವು ಸಾಧ್ಯವಾಗುವುದಿಲ್ಲ. ಬಿಜೆಪಿ 14 ಹೆಚ್ಚಿನ ಮತಗಳನ್ನು ಹೊಂದಿದೆ. ಮತ ವಿಭಜನೆ ಕಷ್ಟದ ಕೆಲಸ. ಆದರೆ ಅತೃಪ್ತಿಯ ದಾಳ ಇಟ್ಟು 9 ಕ್ರಾಸ್ ವೋಟ್ ಮಾಡಿಸಿದರೆ ಸೋಲಿಸಬಹುದು. ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡೇ ಸಂಪುಟದಲ್ಲಿ ಆರು ಖಾಲಿ ಸ್ಥಾನಗಳನ್ನು ಇಟ್ಟುಕೊಂಡಿದ್ದಾರೆ. ಖಾಲಿ ಹುದ್ದೆಗಳ ಆಸೆ ಬಿತ್ತುವ ಮೂಲಕ ಮತಗಳು ಚದುರದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಇತ್ತ ಅವಿರೋಧ ಆಯ್ಕೆಯ ಖುಷಿಯಲ್ಲಿದ್ದ ಸವದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಣಕ್ಕೆ ಇಳಿದಿದ್ದರಿಂದ ಚಿಂತೆಗೀಡಾಗಿದ್ದು, ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.