1 ನಿಮಿಷದಲ್ಲಿ ನಮ್ಮ ಚಿತ್ರ ಯಾವ ರೇಂಜಿಗಿದೆ ಅಂತ ತೋರಿಸುವುದಕ್ಕೆ ನಾನ್ಯಾಕೆ 2 ಗಂಟೆ ಸಿನಿಮಾ ಮಾಡ್ಬೇಕಿತ್ತು?; ಚಿತ್ರತಂಡಕ್ಕೆ ಉಪ್ಪಿ ಶಾಕ್​!

Untitled design (92)
Published on

ಬೆಂಗಳೂರು: ಕನ್ನಡ ಚಿತ್ರರಂಗದ 'ಬುದ್ಧಿವಂತ' ನಿರ್ದೇಶಕ, ರಿಯಲ್​ ಸ್ಟಾರ್​, ನಟ ಉಪೇಂದ್ರ ಇದೀಗ ವರ್ಷಗಳ ಬಳಿಕ ಮತ್ತೊಮ್ಮೆ 'ಯುಐ' ಚಿತ್ರದ ಮುಖೇನ ಡೈರೆಕ್ಟರ್​ ಕ್ಯಾಪ್​ ತೊಟ್ಟಿದ್ದು, ನೆಚ್ಚಿನ ಅಭಿಮಾನಿಗಳನ್ನು ಮನರಂಜಿಸಲು ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಫಸ್ಟ್​ ಲುಕ್​ ಮೂಲಕ ಇಂದು ಸಿನಿಪ್ರೇಕ್ಷಕರ ಮುಂದೆ ಹಾಜರಾಗಿದ್ದಾರೆ. ತುಣುಕು ನೋಡಿದ ಉಪ್ಪಿ ಫ್ಯಾನ್ಸ್​ ಎಂದಿನಂತೆ ತಲೆಕೆಡಿಸಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ.

'ಉಪ್ಪಿ 2' ಚಿತ್ರವನ್ನು ನಿರ್ದೇಶಿಸಿದ ಬಳಿಕ ಇದೀಗ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿರುವ ಉಪೇಂದ್ರ, ‘ಯುಐ’ ಸಿನಿಮಾ (UI ) ಮುಖೇನ ಸಿನಿರಸಿಕರಲ್ಲಿ ಮತ್ತು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಾರೆ. ಈ ಹಿಂದೆಯಷ್ಟೇ ಚಿತ್ರದ ಪೋಸ್ಟರ್​ ಬಿಡುಗಡೆಗೊಂಡು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಅದರಂತೆಯೇ ಈಗ ವಿಭಿನ್ನವಾಗಿ ಚಿತ್ರದ ಫಸ್ಟ್​ ಲುಕ್​ ತುಣುಕನ್ನು ಚಿತ್ರತಂಡ ರಿಲೀಸ್​ ಮಾಡಿದೆ.

‘ಯುಐ’ ಚಿತ್ರವನ್ನು ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ನಿರ್ಮಾಣ ಮಾಡಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಚಿತ್ರದ ಫಸ್ಟ್​ ಲುಕ್ ವಿಡಿಯೋ ಹಂಚಿಕೊಂಡರು. ತುಣುಕು ನೋಡಿದ ಬಳಿಕ ಡಿಫರೇಂಟ್​ ಡೈರೆಕ್ಟರ್​ ಮತ್ತೊಮ್ಮೆ ನಮ್ಮ ತಲೆಗೆ ಹುಳ ಬಿಟ್ಟಿದ್ದಾರೆ ಎಂದು ಪ್ರೇಕ್ಷಕರು ಕಮೆಂಟ್​ ಮೂಲಕ ಅಭಿಪ್ರಾಯಿಸಿದ್ದಾರೆ. ಇದು ಪ್ರಮೋಷನಲ್ ವಿಡಿಯೋ ಎಂದು ಹೇಳಲಾಗಿದ್ದು, ನಿರ್ಮಾಪಕರೊಂದಿಗೆ ಮಾತುಕತೆ ನಡೆಸುವ ಉಪ್ಪಿ, ಚಿತ್ರದ ಫಸ್ಟ್​ ಲುಕ್​ ಅಥವಾ ಟೀಸರ್​ ರಿಲೀಸ್​ ಮಾಡಬೇಕಾ? ಎಂದು ನಿರ್ಮಾಪಕರಿಗೆ ಕೇಳಿದ್ದಾರೆ.

ತದನಂತರ ಚಿತ್ರದ ಬಗ್ಗೆ ಮಾಹಿತಿ ನೀಡಲಿಲ್ಲ ಎಂದರೆ ಪ್ರಚಾರ ಆಗೋದು ಹೇಗೆ ಸರ್​ ಎಂದು ಕೇಳಿದ ನಿರ್ಮಾಪಕರಿಗೆ, "ನಿಜವಾಗಲೂ ಪಬ್ಲಿಸಿಟಿ ಮಾಡಬೇಕಾ? ಫಸ್ಟ್ ಲುಕ್ ಅಥವಾ ಟೀಸರ್ ಬಿಡುಗಡೆಗೊಳಿಸುವ ಅವಶ್ಯಕತೆ ಇದೆಯೇ? ಒಂದು ನಿಮಿಷದಲ್ಲಿ ನಮ್ಮ ಚಿತ್ರ ಯಾವ ರೇಂಜಿಗಿದೆ ಅಂತ ತೋರಿಸುವುದಕ್ಕೆ ನಾನ್ಯಾಕೆ 2 ಗಂಟೆ ಸಿನಿಮಾ ಮಾಡ್ಬೇಕಿತ್ತು! ಸುಳ್ಳಿಗೆ ಹೈಪ್ ತರಬೇಕು, ಸತ್ಯಕ್ಕೆ ತಾನಾಗೇ ಹೈಪ್ ಸಿಗುತ್ತದೆ" ಎಂದು ಹೇಳುವ ಮೂಲಕ ಸಿನಿಪ್ರಿಯರಿಗೆ ಮತ್ತೊಮ್ಮೆ ಟ್ವಿಸ್ಟ್​ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net