ಉಪ್ಪಿಯ ಕಬ್ಜದಲ್ಲಿ ಶೋಲೆ ಪಿಸ್ತೂಲ್;

Upendra 14 March 20
Published on

ಬೆಂಗಳೂರು: ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರವು ಡಾ.ರಾಜಕುಮಾರ್ ಹಾಗೂ ಅಮಿತಾಭ್ ಬಚ್ಚನ್ ಅವರನ್ನು ನೆನಪಿಸಲಿದೆ. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಕನ್ನಡದ ‘ಗಂಧದ ಗುಡಿ’ ಹಾಗೂ ಹಿಂದಿಯ ‘ಶೋಲೆ’ ಚಿತ್ರದ ಝುಲಕ್ ಕಾಣಿಸಲಿದೆ. ಹಾಗಂತ ಆ ಚಿತ್ರಗಳ ಯಾವುದೋ ದೃಶ್ಯ ಇದರಲ್ಲಿ ಇರುವುದಿಲ್ಲ. ಮತ್ತೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಪಿಸ್ತೂಲ್. ಹೌದು, ಹಲವಾರು ವರ್ಷಗಳ ಹಿಂದೆ ‘ಗಂಧದ ಗುಡಿ’ಯಲ್ಲಿ ಡಾ.ರಾಜ್ ಹಾಗೂ ‘ಶೋಲೆ’ಯಲ್ಲಿ ಅಮಿತಾಭ್ ಹಿಡಿದಿದ್ದ ಪಿಸ್ತೂಲನ್ನೇ ಉಪೇಂದ್ರ ‘ಕಬ್ಜ’ದಲ್ಲಿ ಹಿಡಿದು ತೆರೆ ಮೇಲೆ ಮಿಂಚಲಿದ್ದಾರೆ.

‘ನಮ್ಮ ಸಿನಿಮಾದ ಕಥೆಯೇ ರೆಟ್ರೋ ಆಗಿರುವುದರಿಂದ ಹಾಗೂ ‘ಗಂಧದ ಗುಡಿ’, ‘ಶೋಲೆ’ ಚಿತ್ರಗಳು ತೆರೆ ಕಂಡಿದ್ದ ಸಮಯದಲ್ಲೂ ನಮ್ಮ ಚಿತ್ರದ ಕಥೆ ಸಾಗುವುದರಿಂದ, ಅದರಲ್ಲಿ ಬಳಸಿದ್ದ ಪಿಸ್ತೂಲನ್ನೇ ‘ಕಬ್ಜ’ಗೂ ಬಳಸಿಕೊಳ್ಳಲಾಗಿದೆ’ ಎನ್ನುತ್ತಾರೆ ನಿರ್ದೇಶಕ ಆರ್.ಚಂದ್ರು. ‘‘ಶೋಲೆ’ ಬೆಂಗಳೂರು ಸಮೀಪದ ರಾಮನಗರದಲ್ಲಿ ಶೂಟಿಂಗ್ ಆಗಿತ್ತು. ಹೀಗಾಗಿ ‘ಗಂಧದ ಗುಡಿ’ಯಲ್ಲಿ ಡಾ.ರಾಜ್ ಬಳಸಿದ್ದ ಪಿಸ್ತೂಲನ್ನೇ ಅಮಿತಾಭ್ ಬಳಸಿದ್ದರು. ಇವೆರಡೂ ಚಿತ್ರಗಳಿಗೆ ಬೆಂಗಳೂರು ಗನ್ ಹೌಸ್ ಆ ಪಿಸ್ತೂಲ್ ನೀಡಿತ್ತು. ಆ ಬಳಿಕ ಯಾವುದೇ ಚಿತ್ರದಲ್ಲೂ ಆ ಪಿಸ್ತೂಲ್ ಬಳಸಲಾಗಿಲ್ಲ’ ಎನ್ನುವ ಚಂದ್ರು, ‘ಶೂಟಿಂಗ್ ಬಳಿಕ ಆ ಪಿಸ್ತೂಲನ್ನು ಬೆಂಗಳೂರು ಗನ್ ಹೌಸ್​ಗೆ ಮರಳಿಸಲಾಗುವುದು’ ಎನ್ನುತ್ತಾರೆ. ‘ಉಪೇಂದ್ರ ಕೂಡ ಈ ಪಿಸ್ತೂಲ್ ಹಿಡಿದು ರೋಮಾಂಚಿತರಾಗಿದ್ದು, ಆ ಕುರಿತ ವಿಶೇಷ ಅನುಭವ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ’ ಎನ್ನುತ್ತಾರೆ ಚಂದ್ರು. ಸದ್ಯ, ಸಿನಿಮಾದ ಎರಡನೇ ಹಂತದ ಶೂಟಿಂಗ್ ಬೆಂಗಳೂರಿನಲ್ಲಿ ಹಾಕಲಾಗಿರುವ ಸೆಟ್​ಗಳಲ್ಲಿ ನಡೆಯುತ್ತಿದೆ. ಒಟ್ಟು ಐದು ಹಂತಗಳಲ್ಲಿ ಶೂಟಿಂಗ್ ನಡೆಯಲಿದೆ.

ಮತ್ತೆ ತೆಲುಗಿನತ್ತ ಉಪ್ಪಿ ...

ಕಿರಣ್ ಕೊರ›ಪಾಟಿ ನಿರ್ದೇಶನದಲ್ಲಿ ವರುಣ್ ತೇಜ್ ಅಭಿನಯಿಸಲಿರುವ ತೆಲುಗು ಸಿನಿಮಾದಲ್ಲಿ ಉಪೇಂದ್ರ ಅತಿಥಿ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಕ್ಸರ್ ಕುರಿತ ಕಥೆ ಹೊಂದಿರುವ ಈ ಸಿನಿಮಾದ ಫ್ಲ್ಯಾಷ್​ಬ್ಯಾಕ್​ನಲ್ಲಿ ಉಪೇಂದ್ರ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ‘ಕಬ್ಜ’ ಶೂಟಿಂಗ್ ಪೂರ್ಣಗೊಂಡ ಬಳಿಕ ಈ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ‘ಸನ್ ಆಫ್ ಸತ್ಯಮೂರ್ತಿ’ ಬಳಿಕ ತೆಲುಗಿನಲ್ಲಿ ಉಪೇಂದ್ರ ಅಭಿನಯದ ಯಾವುದೇ ಸಿನಿಮಾ ಬಂದಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net