

ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಮದುವೆಯಾಗಿ 11 ವರ್ಷಗಳ ಬಳಿಕ ಅಂದ್ರೆ ಕಳೆದ ಜೂನ್ ತಿಂಗಳಿನಲ್ಲಿ ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾರೆ. ಗರ್ಭ ಧರಿಸಿದ್ದ ಸಂದರ್ಭದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಉಪಾಸನಾ ಅಮ್ಮನಾಗುತ್ತಿರುವ ಬಗ್ಗೆ ಅಮ್ಮಂದಿರ ದಿನದಂದು ಖುಷಿ ಹಂಚಿಕೊಂಡಿದ್ದರು. ನಾನು ತಾಯಿ ಆಗುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ನಾನು ಸಮಾಜದ ನಿರೀಕ್ಷೆಗಳನ್ನು ನೋಡಿ ತಾಯಿಯಾಗಿಲ್ಲ. ನನ್ನ ವೈವಾಹಿಕ ಜೀವನವನ್ನು ಮತ್ತಷ್ಟು ಸದೃಢಪಡಿಸಲು ನಾನು ತಾಯಿಯಾಗಿಲ್ಲ. ನನ್ನ ಮಗುವಿಗೆ ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ ಎಂದು ಉಪಾಸನಾ ಹೇಳಿದ್ದರು.
ಸಿಎಸ್ಆರ್-ಅಪೋಲೋ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಉಪಾಸನಾ ಅವರು, ಸಿಂಗಲ್ ಮದರ್ ಇನ್ನು ಮುಂದೆ, ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ಚಿಕಿತ್ಸೆಗಾಗಿ ಅಪೋಲೋ ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಹೇಳಿದ್ದಾರೆ.
ಉಪಾಸನಾ ಅವರು ಅಪೋಲೋ ಚಿಲ್ಡ್ರನ್ಸ್ ಬ್ರ್ಯಾಂಡ್ ಅನ್ನು ಅಪೋಲೋ ಆಸ್ಪತ್ರೆಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದು, ಈಗ ಸಿಂಗಲ್ ಮದರ್ ಕುರಿತು ಭಾವುಕರಾಗಿ ಮಾತನಾಡಿದ್ದಾರೆ. ಅಪೋಲೋ ಚಿಲ್ಡ್ರನ್ಸ್ ಲೋಗೋ ಅನಾವರಣಗೊಳಿಸಿದ ಅವರು, ಒಂಟಿ ತಾಯಂದಿರು ಅನುಭವಿಸುತ್ತಿರುವ ನೋವಿನ ಕುರಿತು ಮಾತನಾಡಿದ್ದಾರೆ.
ಇನ್ನು ಮುಂದೆ ಸಿಂಗಲ್ ಮದರ್ ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಅಪೊಲೊ ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಪತಿ ರಾಮ್ ಚರಣ್ ಬಗ್ಗೆ ಮಾತನಾಡಿದ ಉಪಾಸನಾ ನನಗೆ ಒಳ್ಳೆಯ ಗಂಡ ಸಿಕ್ಕಿದ್ದಾರೆ. ಇದು ನನ್ನ ಅದೃಷ್ಟ. ಮಗುವಿನ ಲಾಲನೆ ಪಾಲನೆಯಲ್ಲಿ ಅವರು ವಿಶೇಷ ಕಾಳಜಿ ತೋರುತ್ತಾರೆ.
ಆದರೆ ಎಲ್ಲಾ ಮಹಿಳೆಯರಿಗೂ ಈ ಅದೃಷ್ಟವಿರುವುದಿಲ್ಲ. ಒಂಟಿ ತಾಯಂದಿರ ಸಮಸ್ಯೆ ನಾನು ಬಲ್ಲೆ. ಗಂಡನ ಸಹಾಯವಿಲ್ಲದೆ ಮಕ್ಕಳನ್ನು ಸಾಕುವ ತಾಯಂದಿರ ನೋವು ಹೇಗಿರುತ್ತೆ ಎನ್ನುವುದನ್ನು ನನಗೆ ಗೊತ್ತು. ಆದ್ದರಿಂದ ಒಂಟಿ ಅಮ್ಮಂದಿರಿಗೆ ನೆರವಾಗುವುದು ನಮ್ಮ ಉದ್ದೇಶ ಎಂದು ತಿಳಿಸಿದ್ರು.