ಉಪನಿಷತ್

untitled-design-6-68939b06a368b (1)
Published on
ವೇದ ಎಂಬ ಶಬ್ದಕ್ಕೆ ಜ್ಞಾನ ಎಂಬರ್ಥ ಉಂಟು. ವೇದಪುರುಷನ ಶಿರೋಭಾಗವೇ ಉಪನಿಷದ್. ಯಾವುದು ಜ್ಞೇಯಕ್ಕಿಂತ ಅಭಿನ್ನವಲ್ಲದ ಜ್ಞಾನವಿದೆಯೋ ಹಾಗೇ ದೇಶ, ಕಾಲ, ವಸ್ತುಗಳಿಗೆ ಅತೀತವಾಗಿದೆಯೋ ಅದು ಪರಿಪೂರ್ಣ ಬ್ರಹ್ಮ. ಜ್ಞಾನದ ಸ್ವರೂಪವನ್ನು ಸರಿಯಾಗಿ ವಿಚಾರ ಮಾಡದಿದ್ದರೆ ಉಪನಿಷದ್ ಎಂಬುದು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ನಮ್ಮ ಆತ್ಮವನ್ನು ಪರಮಾತ್ಮನ ಹತ್ತಿರಕ್ಕೆ ಕರೆದುಕೊಂಡು ಹೋಗಿ ಅಜ್ಞಾನ ಮತ್ತು ಅದರಿಂದ ಜನಿಸಿದ ಕಾರ್ಯಗಳನ್ನು ನಷ್ಟ ಮಾಡುವುದರಿಂದ ಈ ವಿದ್ಯೆಯನ್ನು ಉಪನಿಷದ್ ಎನ್ನಲಾಗಿದೆ. ಜ್ಞಾನವು ಸ್ವತಃ ಪ್ರಮಾಣವಾಗಿದೆ; ಇನ್ನೊಂದಕ್ಕೆ ಪ್ರಮಾಣವಲ್ಲ.

ಇದರ ಅಭಿಪ್ರಾಯ ಹೀಗಿದೆ: ಯಾವುದೇ ಪದಾರ್ಥದ ನಿಶ್ಚಯದಲ್ಲಿ ಜ್ಞಾನವೇ ನಿರ್ಣಾಯಕವಾಗಿದೆ. ಎಲ್ಲಾ ವ್ಯವಹಾರ ನಮ್ಮ ಜ್ಞಾನದ ಆಧಾರದ ಮೇಲೆಯೇ ನಡೆಯುತ್ತಿದೆ. ವಸ್ತುವು ಇದೆ ಅಥವಾ ಇಲ್ಲ ಎಂಬುದು ಜ್ಞಾನದಿಂದಲೇ ನಿರ್ಣಯಗೊಳ್ಳುತ್ತದೆ. ಉದಾಹರಣೆಗೆ - ವಿಷಯಗಳ ಇರುವಿಕೆ ಇಂದ್ರಿಯಗಳಿಂದ ತಿಳಿಯುತ್ತದೆ. ಇಂದ್ರಿಯಗಳದ್ದು ಮನಸ್ಸಿನಿಂದ, ಮನಸ್ಸಿನದ್ದು ಬುದ್ಧಿಯಿಂದ, ಬುದ್ಧಿಯದ್ದು ಜ್ಞಾನ ಸ್ವರೂಪ ಆತ್ಮನಿಂದ ನಿರ್ಣಯಗೊಳ್ಳುತ್ತದೆ.

ಅಜ್ಞಾನದ ಅನುಭವವೂ ಜ್ಞಾನವೇ ಆಗಿದೆ. ಆದರೆ ಜ್ಞಾನದ ಪ್ರಮಾಣವನ್ನು ಪ್ರಮಾಣೀಕರಿಸಲು ಜ್ಞಾನಕ್ಕಿಂತ ಭಿನ್ನ ವಸ್ತು ಇರುವುದಿಲ್ಲ. ಪ್ರಮಾತಾ, ಪ್ರಮಾಣ, ಪ್ರಮೇಯ ಇವು ತ್ರಿಪುಟಿ. ಇವೆಲ್ಲವೂ ಜ್ಞಾನದ ಮುಖಾಂತರವೇ ಪ್ರಕಾಶಿತಗೊಳ್ಳು ತ್ತವೆ. ಆದ್ದರಿಂದ ಜ್ಞಾನದ ಸಿದ್ಧಿಗೆ ಪ್ರಮಾಣದ ಯಾವ ಅಪೇಕ್ಷವೂ ಇಲ್ಲ. ಇವು ಇದ್ದರೂ ಇಲ್ಲದಿದ್ದರೂ ಜ್ಞಾನ ಇದೆ. ತ್ರಿಪುಟಿಯಲ್ಲಿ ಜ್ಞಾನದಅನ್ವಯವಿದೆ.

ಜ್ಞಾನವು ತ್ರಿಪುಟಿಗಿಂತ ವ್ಯತಿರಿಕ್ತವಾಗಿದೆ. ಅನ್ವಯ-ವ್ಯತಿ ರೇಕ ಇದೊಂದು ನ್ಯಾಯ ಸಮ್ಮತವಾದ ಪದ್ಧತಿ. ಉದಾಹರಣೆಗೆ - ಮಡಿಕೆ ಮಾಡಲು ಕುಂಬಾರನಿಗೆ ಚಕ್ರದ ಅವಶ್ಯಕತೆ ಇದೆ. ಚಕ್ರವಿದ್ದರೆ ಮಡಿಕೆ - ಇದು ಅನ್ವಯ. ಚಕ್ರವಿಲ್ಲದಿದ್ದರೆ ಮಡಿಕೆಯಿಲ್ಲ ಇದು ವ್ಯತಿರೇಕ. ಹಾಗೆಯೇ ಜ್ಞಾನವಿರುವುದರಿಂದ ತ್ರಿಪುಟಿಗಳಿವೆ ಇದು ಅನ್ವಯ. ಜ್ಞಾನವಿಲ್ಲವಾದರೆ ತ್ರಿಪುಟಿಗಳು ಇಲ್ಲ - ಇದು ವ್ಯತಿರೇಕ. ಆದ್ದರಿಂದ ಜ್ಞಾನವು ಅನ್ವಯ- ವ್ಯತಿರೇಕ ಪದ್ಧತಿಯ ಮುಖಾಂತರ ಸಿದ್ಧವಾಗಿದೆ. ಆದ್ದರಿಂದ ಜ್ಞಾನದ ಇರುವಿಕೆಯು ಅಖಂಡವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net