ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರಪಕ್ಷಗಳಿಗೆ ಬಹುಮತ ಖಚಿತ: ಸಿದ್ದರಾಮಯ್ಯ

siddu
Published on

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಪಕ್ಷಗಳ ಒಕ್ಕೂಟದ ಎರಡನೇ ಸಭೆಯಾಗಿದ್ದು, ಸುಮಾರು 24 ಪಕ್ಷಗಳ ನಾಯಕರು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲ ವಿಪಕ್ಷಗಳ ನಾಯಕರು ಇಂದು ಮತ್ತು ನಾಳೆ ಚರ್ಚಿಸಲಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ವಿವರಿಸಿದರು.

ದೇಶವನ್ನು ಲೂಟಿ ಮಾಡಿದಂತಹ ಪಕ್ಷಗಳು ಇಂದು ಒಂದಾಗುತ್ತಿವೆ ಎಂಬ ಬಿಜೆಪಿ ಹೇಳಿಕೆಗೆ ಉತ್ತರ ನೀಡಿದ ಸಿಎಂ, ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುತ್ತಿರುವುದೇ ಬಿಜೆಪಿಯ ಕೊಡುಗೆಯಾಗಿದೆ. ಈ ದೇಶದ ಆರ್ಥಿಕತೆಯನ್ನು ಹಾಳು ಮಾಡಿದವರೇ ಬಿಜೆಪಿಯವರು. ಪ್ರಧಾನಿ ನರೇಂದ್ರ ಮೋದಿಯವರು ಬಂದ ನಂತರ ಬೆಲೆ ಏರಿಕೆ, ಬಡವರು, ರೈತರು, ದಲಿತರು ಇಂದು ಬದುಕಲು ಅಸಾಧ್ಯವಾದ ಪರಿಸ್ಥಿತಿ ಬಂದಿದೆ. ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುವಂತಾಗಿದೆ. ಇದು ಬಿಜೆಪಿಯ ಕೊಡುಗೆ ಎಂದರು.

ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದೇವೆ. ವಿಧಾನಸಬಾ ಚುನಾವಣಾ ಸಂದರ್ಭದಲ್ಲಿ ಮೋದಿಯವರು 28 ಕಡೆ ಪ್ರವಾಸ ಕೈಗೊಂಡಿದ್ದು, ಅವರು ಬಂದ ಕಡೆಗಳೆಲ್ಲಾ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಸ್ಪಷ್ಟ ಬಹುಮತ ದೊರೆಯಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net