ತನ್ನ ಗೆಳತಿಯ ಲಿಂಗ ಬದಲಾಯಿಸುವ ನೆಪದಲ್ಲಿ ಈಕೆ ಮಾಡಿದ್ದೇನು ಗೊತ್ತಾ?

crime news
Published on

ಉತ್ತರಪ್ರದೇಶ: 24 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಗೆಳತಿಯ ಲಿಂಗ ಬದಲಾಯಿಸುವ ನೆಪದಲ್ಲಿ ಮಾಂತ್ರಿಕನ ಜತೆ ಕರೆದೊಯ್ದು ಹತ್ಯೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆಯ ತನಿಖೆಯನ್ನು ಆರ್.ಸಿ ಪೊಲೀಸರು ವಹಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌.ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪ್ರಿಯಾ(30), ಪುವಾಯನ್ ನಿವಾಸಿ ಪ್ರೀತಿ(24) ಎಂಬ ಇಬ್ಬರು ಮಹಿಳೆಯರು ಪರಸ್ಪರ ಸ್ನೇಹ ಬೆಳೆಸಿದ್ದರು. ಸ್ನೇಹ ಪ್ರೀತಿಗೆ ತಿರುಗಿದೆ. ನಂತರದ ದಿನಗಳಲ್ಲಿ ಇಬ್ಬರು ಸಲಿಂಗ ಸಂಬಂಧ ಹೊಂದಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ಅವರು ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಪ್ರಿಯಾ ಜೊತೆಗಿನ ಸಂಬಂಧ ತನ್ನ ಕುಟುಂಬದವರಿಗೆ ತಿಳಿದಿದ್ದೇ ತಡ ಪ್ರೀತಿ ಕುಟುಂಬದವರು ಮದುವೆಯಾಗಲು ಒಪ್ಪಿಗೆ ನೀಡಿಲ್ಲ! ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳಾ ಅವರು ಮೊಹಮ್ಮದಿ ಪ್ರದೇಶದ ನಿವಾಸಿ ಮಾಂತ್ರಿಕ ರಾಮ್ನಿವಾಸ್ ಎಂಬ ವ್ಯಕ್ತಿಯನ್ನು ಭೇಟಿಯಾಗಿ, ಪ್ರಿಯಾಳನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು ಎಂದು ಎಸ್ಪಿ ವರದಿಯಲ್ಲಿ ತಿಳಿಸಿದ್ದಾರೆ.

ಪ್ರಿಯಾ ಪುರುಷನಾಗಲು ಬಯಸಿದ್ದಾಳೆ ಎಂದು ಪ್ರೀತಿ ಮಾಂತ್ರಿಕನಿಗೆ ತಿಳಿಸಿದ್ದಾಳೆ. ಇದನ್ನು ದುರುಪಯೋಗ ಪಡಿಸಿಕೊಂಡ ಪ್ರೀತಿಯ ತಾಯಿ, ಪ್ರಿಯಾಳನ್ನು ಕೊಲ್ಲಲು 1.5 ಲಕ್ಷ ರೂಪಾಯಿ ನೀಡುವುದಾಗಿ ಆತನಿಗೆ ಭರವಸೆ ನೀಡಿದ್ದರು ಎಂದು ಆನಂದ್ ಹೇಳಿದ್ದಾರೆ. ಪ್ರೀತಿ, ಪ್ರಿಯಾಗೆ ಕರೆ ಮಾಡಿ ಮಾಂತ್ರಿಕ ನಿನ್ನ ಲಿಂಗವನ್ನು ಬದಲಾಯಿಸುತ್ತಾನೆ ಎಂದು ನಂಬಿಸಿದ್ದಾಳೆ. ಇದನ್ನು ನಂಬಿದ ಪ್ರಿಯಾ ಏಪ್ರಿಲ್ 13 ರಂದು ಮನೆ ಬಿಟ್ಟು ಬಂದಿದ್ದಾಳೆ.

ಮನೆಯಿಂದ ನಾಪತ್ತೆಯಾದ ಮಗಳ ಹುಡುಕಾಟದಲ್ಲಿ ತೊಡಗಿದ ಕುಟುಂಬಸ್ಥರು, ಏಪ್ರಿಲ್ 18 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರೀತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಮಾಂತ್ರಿಕ ರಾಮ್ನಿವಾಸ್ ಕೈವಾಡ ಪತ್ತೆಯಾಗಿದೆ! ಪೊಲೀಸರು ಶೀಘ್ರವೇ ಆರೋಪಿ ರಾಮ್ನಿವಾಸ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದಾಗ ಆತ ಸತ್ಯವನ್ನು ಹೇಳುವ ಮೂಲಕ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

"ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಪ್ರಿಯಾಳನ್ನು ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣು ಮುಚ್ಚಿ ಮಲಗುವಂತೆ ಹೇಳಿದ್ದೆ, ನಂತರ ಸುತ್ತಿಗೆಯನ್ನು ಬಳಸಿ ಆಕೆಯನ್ನು ಹತ್ಯೆಗೈದೆ" ಎಂದು ಹೇಳಿದ್ದಾನೆ. ಪ್ರಿಯಾಳ ಸ್ನೇಹಿತೆ ಪ್ರೀತಿ ಮತ್ತು ಮಾಂತ್ರಿಕ ರಾಮ್ನಿವಾಸ್ ಅನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಆನಂದ್ ವರದಿಯಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net