ರಾಜ್ಯಕ್ಕೆ ಟಾಪರ್​ ಆದ್ರೂ ಈ ಹುಡುಗಿಯ ಸಂಭ್ರಮ ಕಿತ್ತುಕೊಂಡ ಟ್ರೋಲ್ಸ್​! ಕೊನೆಗೆ ಗೆದ್ದಿದ್ದು ಮಾತ್ರ ಒಳ್ಳೆಯತನ

Prachi Nigam
Published on

ಲಖನೌ: ಈಗ ದೇಶದೆಲ್ಲೆಡೆ 10ನೇ ತರಗತಿ ಫಲಿತಾಂಶ ಪ್ರಕಟವಾಗುತ್ತಿದೆ. ಫಲಿತಾಂಶವನ್ನು ನೋಡಿದ ನಂತರ ಎಲ್ಲ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಹುಡುಗಿ ರಾಜ್ಯಕ್ಕೆ ಟಾಪರ್​ ಆಗಿದ್ದರು ಕೂಡ ಅದನ್ನು ಸಂಭ್ರಮಿಸಲು ಟ್ರೋಲ್​ಗಳು ಅಡ್ಡಿಯಾಗಿವೆ. ಆಕೆಯ ಮುಖದಲ್ಲಿ ಮೀಸೆ ಮತ್ತು ಗಡ್ಡ ಇದೆ ಎಂಬ ಕಾರಣಕ್ಕೆ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯ ಎಂಬುದನ್ನು ಅರಿಯದ ಅವಿವೇಕಿಗಳು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್​ ಆಗಲು ಎಷ್ಟು ಕಷ್ಟಪಟ್ಟಿದ್ದಾಳೆ ಎಂಬುದನ್ನು ತಿಳಿಯದೇ ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಈ ಸಮಾಜದಲ್ಲಿ ಎಲ್ಲವೂ ಕೆಟ್ಟದ್ದಲ್ಲ, ಒಳ್ಳೆಯದೂ ಇದೆ ಎಂಬುದನ್ನು ಕೆಲವರು ತೋರಿಸಿದ್ದಾರೆ. ಅನೇಕ ನೆಟ್ಟಿಗರು ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತು ಟ್ರೋಲ್​ಗಳಿಗೆ ಸಖತ್ ಕೌಂಟರ್‌ ನೀಡುತ್ತಿದ್ದಾರೆ.

ಅಂದಹಾಗೆ ಈ ಹುಡುಗಿಯ ಹೆಸರು ಪ್ರಾಚಿ ನಿಗಮ್. ಇತ್ತೀಚೆಗೆ ಬಿಡುಗಡೆಯಾದ ಉತ್ತರ ಪ್ರದೇಶದ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಸೀತಾಪುರ ಮೂಲದ ಪ್ರಾಚಿ ನಿಗಮ್ 600 ಅಂಕಗಳಿಗೆ 591 ಅಂಕ ಗಳಿಸಿದ್ದಾಳೆ. ಆದರೆ, ಅವಳ ಮುಖದಲ್ಲಿರುವ ಅನಗತ್ಯ ಕೂದಲಿನಿಂದಾಗಿ ಅನೇಕ ಜನರು ಅವಳನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಆಕೆಯ ಫೋಟೋವನ್ನು ವಿವಿಧ ರೀತಿಯಲ್ಲಿ ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ತುಂಬಾ ಕಷ್ಟಪಟ್ಟು ಓದಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಆಕೆಯ ಸಾಧನೆ ದೊಡ್ಡದಿದೆ ಎಂಬ ಸಣ್ಣ ಕಲ್ಪನೆಯೂ ಇಲ್ಲದೇ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಆ ಹುಡುಗಿಯ ಮನಸ್ಸಿಗೆ ಎಷ್ಟು ನೋವಾಗಬಹುದು ಎಂಬ ಕನಿಷ್ಠ ಪ್ರಜ್ಞೆಯು ಇಲ್ಲ.

ಸಮಾಜದಲ್ಲಿ ನಿಜವಾಗಿಯೂ ಇಂತಹ ಕೀಳು ಮನಸ್ಸಿನವರು, ಸಂಕುಚಿತ ಮನೋಭಾವದವರು ಇದ್ದಾರೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಒಳ್ಳೆಯದೂ ಇದೆ ಎಂಬಂತೆ ಪ್ರಾಚಿ ನಿಗಮ್ ಮೇಲೆ ಟ್ರೋಲ್​ ಹೆಚ್ಚಾಗುತ್ತಿದ್ದಂತೆ ಅವರ ಬೆಂಬಲಿಗರೂ ಹೆಚ್ಚಾಗಿದ್ದಾರೆ. ಪ್ರಾಚಿ ನಿಗಮ್‌ಗೆ ಶುಭ ಹಾರೈಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವವರಿಗೆ ಸಖತ್ ಕೌಂಟರ್ ನೀಡುತ್ತಿದ್ದಾರೆ. ಪ್ರಾಚಿ ನಿಗಮ್ ಕೂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರಿಂದ ತುಂಬಾ ಖುಷಿಯಾಗಿದ್ದಾಳೆ. ತನ್ನ ಮೇಲೆ ಆಗುತ್ತಿರುವ ಟ್ರೋಲ್​ಗಳನ್ನು ನಿರ್ಲಕ್ಷಿಸಿ, ಮನೆಯವರ ಜತೆಗೂಡಿ ಸಂಭ್ರಮದಲ್ಲಿ ಮುಳುಗಿದ್ದಾಳೆ. ಇಂತಹ ಚಿಕ್ಕ ವಯಸ್ಸಿನಲ್ಲಿಯೂ ಪ್ರಾಚಿ ತುಂಬಾ ಸಮಚಿತ್ತದಿಂದ ಯೋಚಿಸಿ, ನಕಾರಾತ್ಮಕತೆಯನ್ನು ನಿರ್ಲಕ್ಷಿಸಿದ್ದಾಳೆ.

ಅಂದಹಾಗೆ ಪ್ರಾಚಿ ನಿಗಮ್ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಿಂದ ಬಳಲುತ್ತಿದ್ದಾರೆ ಎಂದು ತೋರುತ್ತದೆ. ಇದರರ್ಥ ಅಂಡಾಶಯಗಳು ಅಸಹಜವಾಗಿ ಹೆಚ್ಚಿನ ಪ್ರಮಾಣದಲ್ಲಿ ಪುರುಷ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ. ಈ ಸ್ಥಿತಿಯು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದರಲ್ಲೂ ಮುಖದ ಮೇಲೆ ಅನಗತ್ಯ ಕೂದಲು ಬೆಳೆಯುತ್ತದೆ. ಪ್ರಾಚಿ ನಿಗಮ್ ಸದ್ಯ ಇಂತಹದೊಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಇದ್ಯಾವುದನ್ನು ತಿಳಿಯದ ಕಿಡಿಗೇಡಿಗಳು ಆಕೆಯನ್ನು ಟ್ರೋಲ್ ಮಾಡಿ ವಿಕೃತ ಆನಂದ ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಾಚಿ ನಿಗಮ್ಗೆ ಬೆಂಬಲ ಹೆಚ್ಚಾಗುತ್ತಿರುವುದು ಸಂತಸದ ವಿಚಾರ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net