ರಾಜಸ್ಥಾನದಲ್ಲಿ ನಾಪತ್ತೆಯಾಗಿದ್ದ ಜೆಇಇ ಆಕಾಂಕ್ಷಿ 11 ದಿನಗಳ ಬಳಿಕ ಹಿಮಾಚಲದಲ್ಲಿ ಪತ್ತೆ! ಪೊಲೀಸರು ಹೇಳಿದ್ದಿಷ್ಟು

Untitled design - 2024-02-24T215519.876
Published on

ರಾಜಸ್ಥಾನ: 11 ದಿನಗಳ ಹಿಂದೆ ರಾಜಸ್ಥಾನದ ಕೋಟಾದಲ್ಲಿರುವ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದ ಜೆಇಇ ಆಕಾಂಕ್ಷಿಯನ್ನು ಇದೀಗ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಪತ್ತೆಹಚ್ಚಿದ್ದು, ಕೂಡಲೇ ಆತನನ್ನು ಸುರಕ್ಷಿತವಾಗಿ ಅವರ ಕುಟುಂಬಸ್ಥರಿಗೆ ಒಪ್ಪಿಸಿದ ಘಟನೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವರದಿಯಾಗಿದೆ.

ಯುವಕ ಪಿಯೂಷ್ ಫೆಬ್ರವರಿ 13ರಂದು ಕೋಟಾದಲ್ಲಿರುವ ತನ್ನ ಹಾಸ್ಟೆಲ್ ಕೊಠಡಿಯಿಂದ ನಾಪತ್ತೆಯಾಗಿದ್ದ ಎಂದು ಹೇಳಲಾಗಿದೆ. ಖಿನ್ನತೆಯಿಂದ ಬಳಲುತ್ತಿದ್ದ ಯುವಕ ಯಾರಿಗೂ ಹೇಳದೆ ರೈಲಿನಲ್ಲಿ ಧರ್ಮಶಾಲಾಗೆ ಹೋಗಿದ್ದ. ಉತ್ತರಪ್ರದೇಶದ ಬುಲಂದ್‌ಶಹರ್‌ ಮೂಲದ ಪಿಯೂಷ್‌ ಕಳೆದ ಎರಡು ವರ್ಷಗಳಿಂದ ಜೆಇಇಗೆ ತಯಾರಿ ನಡೆಸುತ್ತಿದ್ದ. ಅವನ ದಿಢೀರ್​ ಕಣ್ಮರೆಯಿಂದ ಕುಟುಂಬ ಸದಸ್ಯರು ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದರು.

ತಮ್ಮ ಮಗ ನಾಪತ್ತೆಯಾಗಿದ್ದಾನೆ ಹುಡುಕಿಕೊಡಿ ಎಂದು ಪೋಷಕರು ದೂರು ನೀಡಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು, ಆತನಿಗಾಗಿ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನಗಳ ನಂತರ ಆತ ಹಿಮಾಚಲ ಪ್ರದೇಶದಲ್ಲಿ ಧರ್ಮಶಾಲಾದಲ್ಲಿ ಕಾಣಿಸಿಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಧರ್ಮಶಾಲೆಗೆ ತೆರಳಿದ ಪೊಲೀಸರು, ಆತನನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

"ನಾವು ಆತನನ್ನು ಪತ್ತೆಹಚ್ಚಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಧರ್ಮಶಾಲಾದಲ್ಲಿ ಅವನು ಕಾಣಿಸಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಬಂತು. ನಾನು ಅಲ್ಲಿನ ಎಸ್ಪಿ ಮೇಡಂ ಮತ್ತು ಸ್ಥಳೀಯ ಪೊಲೀಸರೊಂದಿಗೆ ಮಾತನಾಡಿದೆ. ನಮ್ಮ ಪೊಲೀಸ್ ತಂಡವು ಅಲ್ಲಿಗೆ ಹೋಗಿ ಅವನನ್ನು ಪತ್ತೆಹಚ್ಚಿತು" ಎಂದು ಅಧಿಕಾರಿಯೊಬ್ಬರು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net