

ಲಖನೌ: ಕರ್ತವ್ಯನಿರತ ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಕಾರಣಕ್ಕೆ ಮೈನ್‌ಪುರಿ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ(UP hospital) ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ಬಂದು 15 ನಿಮಿಷಗಳಾದರೂ ಡಾ. ಆದರ್ಶ್ ಸಂಗರ್ ಅವರ ನಿರ್ಲಕ್ಷ್ಯದ ಕಾರಣದಿಂದಾಗಿ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಕರ್ತವ್ಯನಿರತ ವೈದ್ಯ ಚಿಕಿತ್ಸೆ ನೀಡಿದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರೀಲ್ಸ್ ನೋಡುತ್ತಿದ್ದರು ಎಂದು ಹೇಳಲಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಸಲಿಗೆ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರವೇಶ ಕುಮಾರಿ (60) ಅವರನ್ನು ಮೈನ್‌ಪುರಿ ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತರಲಾಗಿದೆ. ವಿಡಿಯೋದಲ್ಲಿ ರೋಗಿಯನ್ನು ಕುಟಂಬಸ್ಥರೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸ್ಟ್ರೆಚರ್ ಮೇಲೆ ಮಲಗಿಸುವುದನ್ನು ನೋಡಬಹುದು. ಆದರೆ ಎದುರಿನಲ್ಲಿಯೇ ಕುರ್ಚಿಯ ಮೇಲೆ ಕುಳಿತಿರುವ ವೈದ್ಯರು ತಮ್ಮ ಮೊಬೈಲ್ನಲ್ಲಿ ನಿರತರಾಗಿದ್ದಾರೆ.
ಪದೇ ಪದೆ ವಿನಂತಿಸಿದರೂ ವೈದ್ಯರು ತಮ್ಮ ಕುರ್ಚಿಯ ಮೇಲೆ ಕುಳಿತು ತಮ್ಮ ಮೊಬೈಲ್ ಫೋನ್ ಬಳಸುವುದನ್ನು ಮುಂದುವರಿಸಿದರು. ಕುಟುಂಬ ಸದಸ್ಯರ, ಪ್ರಕಾರ ರೋಗಿಯನ್ನು ಸ್ವತಃ ನೋಡುವ ಬದಲು ಡಾ. ಆದರ್ಶ್ ಸಂಗರ್ ಅವರು ನರ್ಸ್ಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ರೋಗಿಯ ಸ್ಥಿತಿ ಹದಗೆಟ್ಟಾಗ ನಮ್ಮ ಬಳಿ ಬಂದ ವೈದ್ಯರು ಕೋಪಗೊಂಡರು ಮತ್ತು ಕಪಾಳಮೋಕ್ಷ ಮಾಡಿದಾಗಿ ತಿಳಿಸಿದರು.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ವೈದ್ಯರು ಫೋನ್ ನೋಡುತ್ತಾ ಕುಳಿತಿದ್ದಾರೆ, ನರ್ಸ್ ಗಳು ರೋಗಿಗೆ ಚಿಕಿತ್ಸೆ ನೀಡುತ್ತಿರುವುದನ್ನು ತೋರಿಸಲಾಗಿದೆ. ಒಂದು ದೃಶ್ಯದಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯ ಮಗನಿಗೆ ವೈದ್ಯರು ಕಪಾಳಮೋಕ್ಷ ಮಾಡುವ ಘಟನೆಯೂ ಸೆರೆಯಾಗಿದೆ. ಈ ವಿಡಿಯೋ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ.ಮದನ್ ಲಾಲ್ ಘಟನೆಯನ್ನು ಖಚಿತಪಡಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ನಾವು ವರದಿಯನ್ನು ಉನ್ನತ ಅಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್)