

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ ಖೇರಿಯಿಂದ ನಾಪತ್ತೆಯಾಗಿದ್ದ ಮಹಿಳಾ ವೈದ್ಯೆಯೊಬ್ಬರ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ವೈದ್ಯೆಯನ್ನು ಆಕೆಯ ಪತಿಯೇ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಂತೆ ಅಂತ್ಯ ಸಂಸ್ಕಾರ ಮಾಡಿದ್ದಾನೆ. ನಂತರ ಕಾಣೆಯಾಗಿದ್ದಾಳೆ ಎಂದು ಬಿಂಬಿಸಿದ್ದಾನೆ ಎಂದು ಪೊಲೀಸರು ಮಾಹಿತಿ ಹೊರಹಾಕಿದ್ದಾರೆ.
ಆಯುರ್ವೇದ ವೈದ್ಯೆ ವಂದನಾ ಅವಸ್ಥಿಯನ್ನು, ಆಕೆಯ ಪತಿ ಅಭಿಷೇಕ್ ಅವಸ್ಥಿ ವಿಚಾರಣೆಯ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಘಟನಾ ಸ್ಥಳದಿಂದ 400 ಮೀ. ದೂರದಲ್ಲಿ ಶವಸಂಸ್ಕಾರ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ನವೆಂಬರ್ 27ರಂದು ಪತ್ನಿ ಕಾಣೆಯಾಗಿದ್ದಾಳೆ ಎಂದು ಅಭಿಷೇಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ವೇಳೆ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು ಕಾಣೆಯಾಗಿವೆ ಎಂದು ಹೇಳಿಕೊಂಡಿದ್ದ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಒಂದೊಂದೇ ಮಾಹಿತಿಗಳು ಲಭ್ಯವಾಗಿವೆ. ಈ ವೇಳೆ ವಂದನಾ ಹಾಗೂ ಅಭಿಷೇಕ್ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಪ್ರತಿದಿನ ಇವರಿಬ್ಬರ ನಡುವೆ ಜಗಳ ಏರ್ಪಡುತ್ತಿತ್ತು ಎಂಬುದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಪತಿಯ ವಂದನಾ ಕಾಣೆಯಾಗುವಲ್ಲಿ ಅಭಿಷೇಕ್ ಕೈವಾಡ ಇರಬಹುದೆಂಬ ಅನುಮಾನದಲ್ಲಿ ಪೊಲೀಸರು ಆತನನ್ನು ಬಂಧಿಸುತ್ತಾರೆ.
ತನಿಖೆಯಲ್ಲಿ ನಡೆದಿರುವ ಘಟನೆಯನ್ನು ಹೇಳಿರುವ ಅಭಿಷೇಕ್, ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ತಂದೆಯ ಸಹಾಯದೊಂದಿಗೆ ಮೃತದೇಹವನ್ನು ಹೊರ ಸಾಗಿಸಿ, ಗಂಗಾ ನದಿಯಲ್ಲಿ ತೇಲಿ ಬಿಟ್ಟೆವು ಎಂದು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)