

ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಅವರಿಗೆ ಕರೊನಾ ಪಾಸಿಟೀವ್ ಬಂದಿದೆ. ತಮ್ಮ ಕಾರ್ಯಾಲಯದ ಕೆಲವು ಅಧಿಕಾರಿಗಳಿಗೆ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಸೆಲ್ಫ್ ಐಸೋಲೇಷನ್ ಮಾಡಿಕೊಂಡಿದ್ದ ಸಿಎಂಗೆ ಇದೀಗ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
"ಆರಂಭಿಕ ರೋಗಲಕ್ಷಣಗಳು ಕಂಡುಬಂದ ನಂತರ, ನಾನು ಕರೊನಾ ಪರೀಕ್ಷೆ ಮಾಡಿಸಿಕೊಂಡೆ. ಅದರಲ್ಲಿ ಪಾಸಿಟೀವ್ ಬಂದಿದೆ. ನಾನು ಸ್ವಯಂ ನಿರ್ಬಂಧದಲ್ಲಿದ್ದು, ವೈದ್ಯರ ಸೂಚನೆಗಳನ್ನು ಪಾಲಿಸುತ್ತಿದ್ದೇನೆ. ನನ್ನ ಕರ್ತವ್ಯಗಳನ್ನು ವರ್ಚುವಲ್ ಆಗಿ ನಿರ್ವಹಿಸುತ್ತಿದ್ದೇನೆ" ಎಂದು ಸಿಎಂ ಆದಿತ್ಯನಾಥರು ಟ್ವೀಟ್ ಮಾಡಿದ್ದಾರೆ. "ಪ್ರದೇಶದ ಎಲ್ಲಾ ವ್ಯವಹಾರಗಳು ಸುಗಮವಾಗಿ ನಡೆಯುತ್ತಿವೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಮುನ್ನೆಚ್ಚರಿಕೆ ವಹಿಸಿ" ಎಂದೂ ಹೇಳಿದ್ದಾರೆ.
ಕಳೆದ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಸ್ಟಾರ ಕ್ಯಾಂಪೇನರ್ ಆಗಿ ಆದಿತ್ಯನಾಥ ಅವರು ಭಾಗವಹಿಸಿದ್ದರು. ಅವರ ಒಎಸ್ಡಿ ಅಭಿಷೇಕ್ ಕೌಶಿಕ್ ಸೇರಿ ಕೆಲವು ನಿಕಟವರ್ತಿ ಅಧಿಕಾರಿಗಳಿಗೆ ಕರೊನಾ ಸೋಂಕು ತಗುಲಿದ್ದು ಈ ಮುನ್ನ ವರದಿಯಾಗಿತ್ತು. ಇದೇ ಸಮಯದಲ್ಲಿ ರಾಜ್ಯದ ಮಾಜಿ ಸಿಎಂ ಅಖಿಲೇಶ್ ಯಾದವ್, ರಾಜ್ಯದ ನಗರಾಭಿವೃದ್ಧಿ ಸಚಿವ ಆಶುತೋಶ್ ಟಂಡನ್ ಕೂಡ ಕರೊನಾ ಪಾಸಿಟೀವ್ ಆಗಿರುವುದು ವರದಿಯಾಗಿದೆ.
ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 18,021 ಕರೊನಾ ಪ್ರಕರಣದಳು ಹೊಸದಾಗಿ ದಾಖಲಾಗಿದ್ದು, ಇದು ದಿನವೊಂದರಲ್ಲಿ ವರದಿಯಾದ ಅತ್ಯಧಿಕ ಸಂಖ್ಯೆಯಾಗಿದೆ. ಒಟ್ಟು 85 ಕರೊನಾ ಸಂಬಂಧಿ ಸಾವುಗಳು ಕೂಡ ವರದಿಯಾಗಿದ್ದವು. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 7,23,582 ಆಗಿದ್ದು, ಈಗಾಗಲೇ 9,309 ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು, ಈ ತಿಂಗಳ ಕೊನೆಯವರೆಗೂ ಶಾಲೆಗಳನ್ನು ಮುಚ್ಚಲಾಗಿದೆ. (ಏಜೆನ್ಸೀಸ್)