Maharashtra Viral Video: 60 ವರ್ಷ ದಾಟಿದರೆ ಬದುಕು ಮುಗಿದಂತೆ, ಇನ್ನು ಹೊಸದನ್ನು ಕಲಿಯಲು ಸಾಧ್ಯವಿಲ್ಲ ಎನ್ನುವವರಿಗೆ 65 ವರ್ಷದ ಈ ಅಜ್ಜಿ ಸ್ಫೂರ್ತಿಯಾಗಿದ್ದಾರೆ. ಬದುಕಿನಲ್ಲಿ ಹಲವು ಕಷ್ಟಗಳನ್ನು ಎದುರಿಸಿದರೂ ಸ್ವಾವಲಂಬಿಯಾಗಿ ಬದುಕುತ್ತಿರುವ ಅವರು, ಇದೀಗ ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಅವರ ಆತ್ಮವಿಶ್ವಾಸ ಮತ್ತು ಛಲದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸತಾರಾ ಜಿಲ್ಲೆಯ ಕರಾಡ್ ತಾಲೂಕಿನ ನಾಂದಗಾಂವ್ ಗ್ರಾಮದ ಮಂಗಳಾ ಆವಳೆ ಅವರು ಜೀವನ ಸಾಗಿಸಲು ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ಅವರು, ಆ ಬಳಿಕ ದಿನಗೂಲಿ ಕೆಲಸ ಮಾಡಿಕೊಂಡೇ ಮಕ್ಕಳನ್ನು ಬೆಳೆಸಿದ್ದಾರೆ.
ವಯಸ್ಸಾದ ಮೇಲೂ ಯಾರ ಮೇಲೂ ಅವಲಂಬಿತರಾಗದೆ ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂದು ನಿರ್ಧರಿಸಿದ ಮಂಗಳಾ ಅಜ್ಜಿ, 60 ವರ್ಷ ದಾಟಿದ ಬಳಿಕ ಆಟೋ ರಿಕ್ಷಾ ಓಡಿಸುವುದನ್ನು ಕಲಿತಿದ್ದಾರೆ. ಸದ್ಯ ಕರಾಡ್-ಉಂಡಾಳೆ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಾ ಜೀವನ ಸಾಗಿಸುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಆಟೋ ಓಡಿಸುವ ಅವರು, ದಿನಕ್ಕೆ ಸುಮಾರು 500ರಿಂದ 700 ರೂಪಾಯಿ ವರೆಗೆ ಸಂಪಾದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳಾ ಅಜ್ಜಿಯ ಧೈರ್ಯ, ಛಲ ಹಾಗೂ ಸ್ವಾವಲಂಬಿ ಬದುಕಿನ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೋ ಹರಿದಾಡುತ್ತಿದ್ದು, ಅವರ ಜೀವನಪಯಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ‘ಹನುಮಾನ್ ಅಂಶ್ 2’ನಲ್ಲಿ ನಟಿಸ್ತಾರಾ? ನಿರ್ಮಾಪಕಿ ಹೇಳಿದ್ದೇನು? | Akshay Kumar
ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿರುವ ಮಂಗಳಾ ಅಜ್ಜಿ, ಇದೀಗ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.