ಕೃಷ್ಣೆಯಿಂದ ಕಾವೇರಿವರೆಗೆ ಕಾರ್ಯಕ್ರಮದಲ್ಲಿ ನಾಡಿನ ಸಾಹಿತ್ಯ ಸಂಸ್ಕೃತಿ, ಕಲೆ ಅನಾವರಣ - From the Krishna to the Kaveri' programme

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ’ ಕಾರ್ಯಕ್ರಮದಲ್ಲಿ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ ಪರಂಪರೆ ಅನಾವರಣಗೊಂಡಿತ್ತು.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜನೆ
ಕೃಷ್ಣೆಯಿಂದ ಕಾವೇರಿವರೆಗೆ ಕಾರ್ಯಕ್ರಮ
Published on: 

ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ’ ಕಾರ್ಯಕ್ರಮದಲ್ಲಿ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ ಪರಂಪರೆ ಅನಾವರಣಗೊಂಡಿತ್ತು.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕಥಾವನ ಮಕ್ಕಳ ಪುಸ್ತಕ ಸರಣಿ-1ರ 10 ಪುಸ್ತಕಗಳನ್ನು ಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಬಿಡುಗಡೆ ಮಾಡಿದರು. ರಾಜ್ಯದ ಸಾಂಪ್ರದಾಯಿಕ ಕರಕುಶಲ ಕಲೆಗಳು ಮತ್ತು ನೇಯ್ಗೆ ಪರಂಪರೆಯ ಕುರಿತ ಸಂವಾದ ನಡೆಯಿತು. ಕಲಾಗಂಗೋತ್ರಿ ತಂಡದವರು, ಕವಿ ಕೆ. ಎಸ್.ನರಸಿಂಹಸ್ವಾಮಿ ಅವರ ಕವಿತೆ ಆಧರಿಸಿದ ಸಂಗೀತ ನಾಟಕ ‘ಮೈಸೂರು ಮಲ್ಲಿಗೆ’ ಪ್ರದರ್ಶಿಸಿದರು. ಮೇಘಾ, ಸುಬ್ರಹ್ಮಣ್ಯ ಕುಮಾರ, ವೈಶಾಲಿ ಜಾಧವ್ ಹಾಗೂ ಸದಾಶಿವ ನಾಯ್ಕ, ಕರ್ನಾಟಕದ ಸಾಂಪ್ರದಾಯಿಕ ತಿನಿಸುಗಳ ಸಾಂಸ್ಕೃತಿಕ, ಪೌಷ್ಠಿಕ ಮತ್ತು ಆಯುರ್ವೇದ ಮಹತ್ವವನ್ನು ಪರಿಚಯಿಸಿದರು.

‘ಜಗವೆಲ್ಲ ತೊಯ್ದ ಬೆಳಕು ರಾಜ್’ ಸಾಕ್ಷ್ಯಚಿತ್ರದ ಪ್ರದರ್ಶನ ಮತ್ತು ಚರ್ಚೆ ಮೂಲಕ ಡಾ. ರಾಜ್‌ಕುಮಾರ್ ಅವರ ಸಾಂಸ್ಕೃತಿಕ ಪರಂಪರೆ, ಸಮಾಜದ ಮೇಲೆ ಅವರು ಬೀರಿದ ಪ್ರಭಾವವನ್ನು ವಿಶ್ಲೇಷಿಸಲಾಯಿತು. ಅಪ್ಪಗೆರೆ ತಿಮ್ಮರಾಜು ಅವರ ಜನಪದ ಸಂಗೀತ ಸಂಭ್ರಮವು ವಿಶೇಷ ಗಮನ ಸೆಳೆಯಿತು. ನಾಡಿನ ಜನಪದ ಸಂಗೀತ ಪರಂಪರೆಯ ವೈವಿಧ್ಯವನ್ನು ಪರಿಚಯಿಸಿತು. ಕೃತಕ ಬುದ್ಧಿಮತ್ತೆ(ಎಐ) ಯುಗದಲ್ಲಿ ಕನ್ನಡಿಗರ ಉದ್ಯಮಶೀಲತೆಗೆ ಲಭ್ಯವಿರುವ ಅವಕಾಶಗಳು ಮತ್ತು ಸವಾಲುಗಳ ಕುರಿತು ವಸಂತ ಶೆಟ್ಟಿ, ಸಂಜಯ್ ಆನಂದರಾಮ್, ಸಚಿನ್ ನಾಯ್ಕ್ ಅವರೊಂದಿಗೆ ಸಂವಾದ ನಡೆಯಿತು.

Also Read
ದೀಪಾವಳಿ ಹಬ್ಬಕ್ಕಿಲ್ಲ ಮಳೆ - No rain
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜನೆ

ಪಾರಂಪರಿಕ ಛಾಯಾಗ್ರಹಣ, ಪ್ರಿಂಟ್ ಗ್ರಹಿಕೆ ಮತ್ತು ಮುದ್ರಣಕಲೆ ಕುರಿತ ಕಾರ್ಯಾಗಾರವು ದೃಶ್ಯ ದಾಖಲಾತಿ, ಸಾಂಪ್ರದಾಯಿಕ ಕಲಾ ಪ್ರಕ್ರಿಯೆಗಳ ಕುರಿತು ಜನರಿಗೆ ಅನುಭವಾತ್ಮಕ ಪರಿಚಯ ಒದಗಿಸಿತು. ಇಮ್ತಿಯಾಜ್ ಸುಲ್ತಾನ್ (ಗಾಯನ), ಅಭಿಷೇಕ್ ದಾವಣಗೆರೆ (ತಬಲಾ), ಕಾರ್ತಿಕ್ (ಮ್ಯಾಂಡೊಲಿನ್), ಪ್ರಮೋದ್ ಜೀವಾ (ಹಾರ್ಮೋನಿಯಂ) ಹಾಗೂ ಮಂಡಲಗಿರಿ ಪ್ರಸನ್ನ (ಸಾಹಿತ್ಯ ವಿಶ್ಲೇಷಣೆ) ಅವರಿಂದ ‘ಗಝಲ್ ಯಾನ ಮಧುರ ಗಾನ’ ಎಂಬ ಗಝಲ್ ಸಂಗೀತ ಕಾರ್ಯಕ್ರಮವು ಆಕರ್ಷಣೆ ಕೇಂದ್ರವಾಗಿತ್ತು.

ಕಲಾರೂಪಗಳ ಅನಾವರಣ:

ಮರಳು ಮಾಧುರ್ಯ ಕಾರ್ಯಕ್ರಮದಲ್ಲಿ ಪ್ರವೀಣ್ ಡಿ. ರಾವ್, ರಾಘವೇಂದ್ರ ಹೆಗಡೆ, ಮರಳು ಶಿಲ್ಪಕಲೆಯನ್ನು ಸಂಗೀತದೊಂದಿಗೆ ಸಂಯೋಜಿಸಿ ವಿಶಿಷ್ಟ ಕಲಾನುಭವವನ್ನು ಪ್ರೇಕ್ಷಕರಿಗೆ ಒದಗಿಸಿದರು. ಒಟ್ಟಾರೆ 2 ದಿನಗಳ ಕಾರ್ಯಕ್ರಮಗಳು ನೇಯ್ಗೆಗಳು, ಮದನಿಕಾ ಮತ್ತು ಮಕರ ತೋರಣ ಪ್ರದರ್ಶನಗಳು ರಾಜ್ಯದ ಕರಕುಶಲ ಕಲೆಗಳು, ವಸ್ತ್ರಪರಂಪರೆ ಮತ್ತು ಸಾಂಪ್ರದಾಯಿಕ ಕಲಾರೂಪಗಳನ್ನು ಅನಾವರಣಗೊಳಿಸಿದವು. ಹಬ್ಬದ ಸಂಭ್ರಮದ ಪಯಣ, ಪ್ರಾಚೀನ ಆಟಗಳು- ಕಾಲಾತೀತ ಬೆಸುಗೆಗಳು ಮೊದಲಾದ ಸಂವಾದಾತ್ಮಕ ಚಟುವಟಿಕೆಗಳು ಸಂದರ್ಶಕರಿಗೆ ಕರ್ನಾಟಕದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನುಭವಾತ್ಮಕವಾಗಿ ಅರಿಯುವ ಅವಕಾಶವನ್ನು ಒದಗಿಸಿದವು.