ದೇಶದ ವೈಜ್ಞಾನಿಕ, ಸೈನಿಕ ಶಕ್ತಿ ಅನಾವರಣ

exibition
Published on

ಶಿವಮೊಗ್ಗ: ವೈಜ್ಞಾನಿಕವಾಗಿ ದೇಶದ ಪ್ರಗತಿ, ಪ್ರಬಲ ಸೈನಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ, ಸಂಶೋಧನೆಯಲ್ಲಿ ನಾವು ಸಾಧಿಸಿದ ಮೈಲಿಗಲ್ಲುಗಳು...ಹೀಗೆ ಹತ್ತು ಹಲವು ಕೌತುಕದ ಸಂಗತಿಗಳಿಗೆ ವೇದಿಕೆಯಾಗಿರುವುದು ಶಿವಮೊಗ್ಗ ನವುಲೆಯ ಕೃಷಿ ಮಹಾವಿದ್ಯಾಲಯ ದ ಆವರಣ.

ಸೋಮವಾರದಿಂದ ಈ ಆವರಣದಲ್ಲಿ ಹೊಸದೊಂದು ವೈಜ್ಞಾನಿಕ ಲೋಕವೇ ಮೈದಳೆದು ನಿಂತಿದೆ. ಇನ್ನೂ ನಾಲ್ಕು ದಿನ ಮಹಾವಿದ್ಯಾಲಯದ ಆವರಣ ಸಾವಿರಾರು ಮಕ್ಕಳು ವಿಜ್ಞಾನದ ಕೌತುಕವನ್ನು ತಣಿಸುವ ಸ್ಥಳವಾಗಲಿದೆ. ಇಲ್ಲಿ ಇಸ್ರೋ, ವಿಐಟಿಎಂ, ಡಿಆರ್‌ಡಿಒ, ಐಪಿಆರ್ ಸಂಸ್ಥೆಗಳು ಅನೇಕ ಸಂಗತಿಗಳನ್ನು ಜನರಿಗೆ ತಿಳಿಸಲು ಸಿದ್ಧವಾಗಿವೆ. ಇಲ್ಲಿ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ಎಸ್‌ಎಎಸ್‌ಆರ್‌ಎ(ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಕಲಾ ಪ್ರಗತಿ ಸಂಸ್ಥೆ), ಕೆಎಸ್‌ಎಸ್‌ಆರ್‌ಸಿ(ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿವಿ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತುಪ್ರದರ್ಶನ -ಅನ್ವೇಷಣೋತ್ಸವ -2025 ಹಲವು ಕಾರಣಗಳಿಂದ ಭಿನ್ನ ಎನಿಸಿಕೊಂಡಿದೆ.

ಇಸ್ರೋದ ಸ್ಪೇಸ್ ಆನ್ ವ್ಹೀಲ್ಸ್ ಹಾಗೂ ವಿಐಟಿಎಂ (ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ)ನ ಸೈನ್ಸ್ ಆನ್ ವ್ಹೀಲ್ಸ್ ಮೂಲಕ ಅತ್ಯಾಧುನಿಕ ಬಸ್‌ನೊಳಗೆ ವೈಜ್ಞಾನಿಕ ಮಹತ್ವದ ಅಂಶಗಳನ್ನು ಅನಾವರಣಗೊಳಿಸಿವೆ. ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಇವುಗಳ ವೀಕ್ಷಣೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಮೂರ‌್ನಾಲ್ಕು ಗಂಟೆ ಇವೆಲ್ಲವುಗಳನ್ನೂ ಸಮರ್ಪಕವಾಗಿ ವೀಕ್ಷಣೆ ಮಾಡಿದರೆ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ತಿಳಿಯಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net