ಹೊಸ ಪುಸ್ತಕ: ಮಣ್ಣಿನ ಮಗನ ಸಾಧನೆಯ ಅನಾವರಣ

ವಿಜಯವಾಣಿ (14)
Published on

| ಡಾ. ಪ್ರಧಾನ್ ಗುರುದತ್ತ, (ಲೇಖಕರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು)

ಕರ್ನಾಟಕ ರಕ್ಷಣಾ ವೇದಿಕೆಯ ಸಕ್ರಿಯ ಮುಖಂಡರಲ್ಲಿ ಒಬ್ಬರೂ, ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರೂ ಆದ ನೇ.ಭ. ರಾಮಲಿಂಗ ಶೆಟ್ಟಿ ಅವರು ಎಚ್.ಡಿ. ದೇವೇಗೌಡ ಅವರನ್ನು ಕುರಿತ ವಿಶಿಷ್ಟ ಕೃತಿಯೊಂದನ್ನು ಹೊರತಂದಿದ್ದಾರೆ. ಅದರ ಶೀರ್ಷಿಕೆಯೇ ‘ಮಣ್ಣಿನ ಮಗ’.

ರಾಷ್ಟ್ರದ ಪ್ರಧಾನಮಂತ್ರಿಯ ಗೌರವಪೂರ್ಣ ಸ್ಥಾನಕ್ಕೆ ಏರಿದ ರಾಜಕಾರಣಿಗಳಲ್ಲಿ ಮೊದಲ ಕನ್ನಡಿಗರು ಅವರಾಗಿರುವುದು ಕನ್ನಡ ನಾಡಿಗೇ ಅಭಿಮಾನದ ಹಾಗೂ ಗೌರವದ ಸಂಗತಿಯಾಗಿದೆ. ವಿವಿಧ ಹಂತಗಳ ರಾಜಕಾರಣದ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಹಾಗೂ ಮಾಡಿರುವ ವಿಶಿಷ್ಟ ಸಾಧನೆಗಳು ಅವರನ್ನು ಕುರಿತ ಅನೇಕ ಜೀವನ ಚಿತ್ರಣಗಳ ಹಾಗೂ ಅಭಿನಂದನಾ ಗ್ರಂಥಗಳ ಪ್ರಕಟಣೆಗೆ ಕಾರಣವಾಗಿವೆ. ಜೈನಾಬ್ ಅಶ್ರಫ್ ಅವರ ಎಚ್.ಡಿ. ದೇವೇಗೌಡ, ಡಾ. ಪ್ರಧಾನ್ ಗುರುದತ್ತ ಮತ್ತು ಡಾ. ಸಿ. ನಾಗಣ್ಣ ಅವರ ‘ಸಾಧನೆಯ ಶಿಖರಾರೋಹಣ’ (ಇದು ಹಿಂದಿಯಲ್ಲೂ ಪ್ರಕಟವಾಗಿದ್ದು, ಇದರ ಇಂಗ್ಲಿಷ್ ಆವೃತ್ತಿಯೂ ಸಿದ್ಧವಾಗುತ್ತಿದೆ) ಮತ್ತು ಸುಗತ ಶ್ರೀನಿವಾಸರಾಜು ಅವರ "Furrows in a Field' (ಇದು ‘ನೇಗಿಲ ಗೆರೆ’ಗಳು ಎಂಬ ಹೆಸರಿನಲ್ಲಿ ಕನ್ನಡಕ್ಕೂ ಬಂದಿದೆ) ಇವುಗಳನ್ನು ಮುಖ್ಯವಾಗಿ ಹೆಸರಿಸಬಹುದಾಗಿದೆ.

ಅವರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ಮಾಡಿದ ಭಾಷಣಗಳ ಇಂಗ್ಲಿಷ್ ಮತ್ತು ಕನ್ನಡ ಆವೃತ್ತಿಗಳೂ ಸಿದ್ಧವಾಗುತ್ತಿವೆ. ಈ ಸರತಿಯಲ್ಲಿ ನೇ.ಭ. ರಾಮಲಿಂಗ ಶೆಟ್ಟಿ ಅವರು ಎಚ್.ಡಿ. ದೇವೇಗೌಡರ ಕುರಿತು ಬರೆದ ‘ಮಣ್ಣಿನ ಮಗ ಒಂದು ವಿಶಿಷ್ಟ ಕೃತಿಯಾಗಿರುವುದಕ್ಕೆ ಕಾರಣ ಗೌಡರ ಕುರಿತ 182 ಪುಟಗಳಲ್ಲಿ ಬಾಲ್ಯದಿಂದ ಹಿಡಿದು ಇತ್ತೀಚಿನ ರಾಜ್ಯಸಭೆ ಸದಸ್ಯತ್ವದವರೆಗಿನ ಸಾಧನೆಯ ಪಥದ ವಿವರಗಳು ಇವೆ. ಉಳಿದ ಭಾಗದ 137 ಪುಟಗಳಲ್ಲಿ (ಒಟ್ಟು 344 ಪುಟಗಳು) ನಾಡಿನ ಹಲವಾರು ಹಿರಿಯ ಚೇತನಗಳು, ಬಂಧುಗಳು, ಒಡನಾಡಿಗಳು, ಪತ್ರಕರ್ತರು, ಸಾಹಿತಿಗಳು ಕಂಡಿರಿಸಿರುವ ವ್ಯಕ್ತಿ ಚಿತ್ರಗಳಿವೆ. ಮೊದಲ ಭಾಗದ ಕೊಡುಗೆ ಪೂರ್ಣವಾಗಿ ರಾಮಲಿಂಗ ಶೆಟ್ಟಿ ಅವರು ಕೊಟ್ಟಿರುವ ಚಿತ್ರಣವಾದರೆ, 2ನೇ ಭಾಗ ಇತರರು ಕಂಡಿರುವ ದೇವೇಗೌಡರ ವ್ಯಕ್ತಿತ್ವದ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತದೆ.

ಈ ದೃಷ್ಟಿಯಲ್ಲಿ ಈ ಕೃತಿಗೆ ಕೊಟ್ಟಿರುವ ಉಪಶೀರ್ಷಿಕೆ ‘ನಾನು ಕಂಡಂತೆ ಮತ್ತು ನಾಡು ಕಂಡಂತೆ’ ಔಚಿತ್ಯಪೂರ್ಣವಾಗಿದೆ. ರಾಮಲಿಂಗ ಶೆಟ್ಟಿ ಅವರು ಕೊಟ್ಟಿರುವ ‘ಮಣ್ಣಿನ ಮಗ’ ಕೃತಿ ದೇವೇಗೌಡರ ಸಾಧನೆಗಳ ಚಿತ್ರಣ ಕೇವಲ ಹೊಗಳು ಭಟ್ಟಂಗಿತನವಿರದೆ, ನೈಜ ನಿರೂಪಣೆಯಾಗಿದೆ ಎಂಬುದಕ್ಕೆ ರಾಮಲಿಂಗ ಶೆಟ್ಟಿ ಅವರು ದೇವೇಗೌಡರ ಕೋಪಕ್ಕೆ ಗುರಿಯಾಗಿದ್ದ ಸಂದರ್ಭ (ಪುಟ 190), ರಾಮಕೃಷ್ಣ ಹೆಗಡೆ ಮತ್ತು ಪೊ›. ವೆಂಕಟಗಿರಿ ಗೌಡ ಅವರೊಂದಿಗಿನ ವಿರಸದ ವಿಚಾರ (ಪು.107), ಈದ್ಗಾ ಮೈದಾನದ ಸಮಸ್ಯೆಯ ಸೌಹಾರ್ದಪೂರ್ಣ ಪರಿಹಾರ (ಪು.104) ಇವೆಲ್ಲ ದೇವೇಗೌಡ ಅವರ ವ್ಯಕ್ತಿತ್ವದ ವೈಶಿಷ್ಟ್ಯವನ್ನು ಸಾರಿ ಹೇಳುವ ಪ್ರಸಂಗಗಳೇ ಆಗಿವೆ. ಒಟ್ಟಿನಲ್ಲಿ ಈ ಪುಸ್ತಕದ ಓದು ದೇವೇಗೌಡರ ಸಾಧನೆಗಳ ಸುಂದರ, ಸಂಕ್ಷಿಪ್ತ ಚಿತ್ರಣವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net