ಗಿರಿಗಿಟ್ಲೆ ಕೃತಿಯಲ್ಲಿ ಸಂಸ್ಕೃತಿ, ಸಂಘರ್ಷದ ಅನಾವರಣ

book
ತೀರ್ಥಹಳ್ಳಿ ಗೋಪಾಲ ಗೌಡ ರಂಗಮಂದಿರದಲ್ಲಿ ಗಿರಿಗಿಟ್ಲೆ ಕೃತಿ ಬಿಡುಗಡೆ ಮಾಡಲಾಯಿತು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಪಿ.ಭಾರತಿದೇವಿ, ವಿಜಯದೇವ್, ಶಿವಾನಂದ ಕರ್ಕಿ ಇತರರಿದ್ದರು.
Published on

ತೀರ್ಥಹಳ್ಳಿ: ನಾವು ಕಟ್ಟಿಕೊಂಡ ಮಿತಿಗಳನ್ನು ಮೀರಿ ಈ ಕೃತಿ ಯೋಚಿಸುತ್ತದೆ. ವಿದೇಶದ ಬೃಹತ್ ಕಟ್ಟಡದ ನಡುವೆ ಇಷ್ಟದ ಮಣ್ಣಿಗಾಗಿ ಹುಡುಕುತ್ತಾರೆ. ಕೊನೆಗೆ ಸೋತು ಇಲ್ಲಿಯೇ ನೆಲೆಸಬೇಕೆಂದು ಅನ್ನಿಸಲಿಲ್ಲ ಎಂದು ಲೇಖಕ ಹತಾಶರಾಗಿ ತಾಯ್ನಡನ್ನು ನೆನೆಯುತ್ತಾರೆಂದು ಪ್ರಾಧ್ಯಾಪಕಿ ಪಿ.ಭಾರತಿದೇವಿ ಅಭಿಪ್ರಾಯಪಟ್ಟರು.

ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಶನಿವಾರ ಧ್ವನಿ ಪ್ರಕಾಶನ ಹೊರತಂದ ಲೇಖಕ ಶಿವಾನಂದ ಕರ್ಕಿ ಅವರ ಗಿರಗಿಟ್ಲೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ವಿಮಾನ ನಿಲ್ದಾಣದಲ್ಲಿ ಚೆನ್ನಾಗಿ ಕಾಣದವರನ್ನು ಕಳ್ಳರಂತೆ ಉಪಚರಿಸುವ ರೀತಿ ಬಗ್ಗೆ ಲೇಖಕ ಬೇಸರ ವ್ಯಕ್ತಪಡಿಸುತ್ತಾರೆ. ಮಲೇಷಿಯಾ, ಥೈಲ್ಯಾಂಡ್, ಸಿಂಗಾಪುರದ ನಡುವಿನ ವೈರುಧ್ಯಗಳನ್ನು ಬಿಡಿಸಿ ಸಂಸ್ಕೃತಿ, ಸಂಘರ್ಷದ ಅರಿವು ವಿಸ್ತರಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಥೈಲ್ಯಾಂಡ್ ಕೇಬಲ್ ಕಾರಿನ ಪ್ರಯಾಣದ ವೇಳೆ ಅನಾಹುತ ಸಂಭವಿಸಿದರೆ ನಮ್ಮ ಜಕಣಿ ಊರಿಗೆ ತರುವವರು ಯಾರು ಎಂಬ ಪ್ರಶ್ನೆಯನ್ನು ಈ ಕೃತಿ ಹುಟ್ಟುಹಾಕುತ್ತದೆ. ಲಿಂಬೆ ಹಣ್ಣುಗಳನ್ನು ಮಂತ್ರಿಸಿ ಗಣಮಗ ಜಕಣಿಯನ್ನು ತೀರ್ಥಹಳ್ಳಿಗೆ ತಂದು ಕೂಡಿಸುವ ಸಂಪ್ರದಾಯವನ್ನು ಸ್ವಾರಸ್ಯಕರವಾಗಿ ಲೇಖಕ ಬಿಂಬಿಸಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಾಹಿತ್ಯ ರಚನೆಗೆ ವಿಭಿನ್ನವಾದ ಶಕ್ತಿ ಇರಬೇಕಾಗುತ್ತದೆ. ಉತ್ತಮ ಓದುಗ ಅಂಗೈನಲ್ಲಿ ಎಲ್ಲ ಇದ್ದರೂ ಬರೆಯಲಾರ. ಸಂಸ್ಕೃತಿಯನ್ನು ವಿಮರ್ಶಾತ್ಮಕವಾಗಿ ನೋಡಿದಾಗ ಮಾತ್ರ ಸಾಹಿತ್ಯ ರಚನೆ ಸಾಧ್ಯ. ಅಂತಹ ಅನುಭವಗಳನ್ನು ಕೃತಿ ಕಟ್ಟಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಸಹ್ಯಾದ್ರಿ ಸಮೂಹ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್, ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಲೇಖಕ ಶಿವಾನಂದ ಕರ್ಕಿ, ರಾಘವೇಂದ್ರ ಮೇಗರವಳ್ಳಿ, ನಿಶ್ಚಲ್ ಜಾದೂಗಾರ್, ಟಿ.ಎನ್.ಅರವಿಂದ್, ಕೊಪ್ಪಲು ರಾಮಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net