

ಭದ್ರಾವತಿ: ನಗರಸಭೆಯಿಂದ ಆಚರಿಸಲಾಗುವ ನಾಡಹಬ್ಬ ನವರಾತ್ರಿ ಮತ್ತು ದಸರಾ ಉತ್ಸವಕ್ಕೆ ಹಿರಿಯ ನಾಗರಿಕ, ಸಮಾಜ ಸೇವಕ ಎಚ್.ವಿ.ಶಿವರುದ್ರಪ್ಪ ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮೊದಲು ಶಾಸಕ ಬಿ.ಕೆ.ಸಂಗಮೇಶ್ವರ್ ಮತ್ತಿತರರು ರಂಗಪ್ಪ ವೃತ್ತದಲ್ಲಿ ನಿರ್ಮಿಸಿರುವ ಚಾಮುಂಡೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಸಾರೋಟಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ನಗರಸಭೆ ಸಭಾಂಗಣಕ್ಕೆ ಕರೆತರಲಾಯಿತು.
ಎಚ್.ವಿ.ಶಿವರುದ್ರಪ್ಪ ಮಾತನಾಡಿ, ನಗರಸಭೆಯ ದಸರಾ ಮಹೋತ್ಸವದ ಉದ್ಘಾಟನೆಗೆ 87 ವರ್ಷದ ನನಗೆ ಆಹ್ವಾನ ನೀಡಿದ್ದಕ್ಕಾಗಿ ಹಾಗೂ ತಾಯಿ ಚಾಮುಂಡೇಶ್ವರಿ ಈ ಸುಸಂದರ್ಭ ಒದಗಿಸಿದ್ದಕ್ಕಾಗಿ ಧನ್ಯನಾಗಿದ್ದೇನೆ ಎಂದರು.
ನಾಡಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆ ದಸರಾ ಮಹೋತ್ಸವ ತಲೆತಲಾಂತರದಿಂದ ಸಾಗಿ ಬಂದಿದೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಆಡಳಿತದ ನಂತರದಲ್ಲಿ ಮೈಸೂರು ಸಂಸ್ಥಾನದ ಅರಸರಿಂದ ನಡೆಯುತ್ತಿದ್ದ ದಸರಾ ಮಹೋತ್ಸವ ಇಂದು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ನಾಡಿನಾದ್ಯಂತ ನಡೆಯುತ್ತಿದೆ ಎಂದು ಹೇಳಿದರು.
ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಆಚಾರ-ವಿಚಾರಗಳನ್ನು ಅನಾವರಣಗೊಳಿಸುತ್ತದೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಈ ಬಾರಿ ನಾಡಿನಲ್ಲೆಡೆ ಉತ್ತಮ ಮಳೆಯಾಗಿದೆ. ಬೆಳೆ ಸಮೃದ್ಧವಾಗಿದೆ. ಜನರ ಜೀವನ ಹಸನಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮಾತನಾಡಿ, ಈ ಬಾರಿ 11 ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ಎಲ್ಲ ಕಾರ್ಯಕ್ರಮಗಳಲ್ಲೂ ನಗರದ ಜನತೆ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷ ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯ ಬಿ.ಕೆ.ಮೋಹನ್, ಪೌರಾಯುಕ್ತ ಕೆ.ಎನ್.ಹೇಮಂತ್, ಚನ್ನಪ್ಪ, ಬಿ.ಟಿ.ನಾಗರಾಜ್, ಬಿಇಒ ಎ.ಕೆ.ನಾಗೇಂದ್ರಪ್ಪ, ಬಿ.ಎಸ್.ಗಣೇಶ್, ಕದಿರೇಶ್, ಸುದೀಪ್ ಇತರರಿದ್ದರು.