

ಬೆಂಗಳೂರು: ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅಪ್ಪಟ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ವರ್ಗದ ರೈಲ್ವೆ ನೌಕರ ಸಂಘ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಬ್ರಿಟಿಷರ ಜತೆಗೆ ಕೆಲವೇ ಕೆಲ ಜನರಲ್ಲಿ ಬಹಳ ಧೈರ್ಯ ಮತ್ತು ಸ್ಪಷ್ಟತೆಯಿಂದ ಮಾತನಾಡುವವರ ಪೈಕಿ ಅಂಬೇಡ್ಕರ್ ಒಬ್ಬರು. ಅಧಿಕಾರ ಬಿಡುವ ಸಂದರ್ಭದಲ್ಲಿ ಬ್ರಿಟಿಷರು, ಈ ದೇಶ ಒಂದಾಗಿ ಉಳಿಯುತ್ತದೆಯೇ ಹಾಗೂ ಆಡಳಿತ ಮಾಡುವ ಶಕ್ತಿ ನಿಮಗೆ ಇದೆಯೇ ಎಂದು ಪ್ರಶ್ನೆ ಕೇಳಿದ್ದರು. ಆಗ ಅಂಬೇಡ್ಕರ್ ಎದ್ದು ನಿಂತು, ಈ ದೇಶವನ್ನು ವಿಭಜನೆ ಮಾಡಿದ್ದವರು ನೀವು, ಇಲ್ಲಿಂದ ತೊಲಗಿದರೆ ಭಾರತ ಒಂದಾಗಿ ಉಳಿಯುತ್ತದೆ ಹಾಗೂ ದೇಶದ ಅಂತರ್ಗತ ಶಕ್ತಿ ಮತ್ತು ಮಾನವೀಯ ಗುಣಗಳು ನಮ್ಮೆಲ್ಲರನ್ನು ಒಂದಾಗಿಸುತ್ತದೆ ಎಂದು ಬ್ರಿಟಿಷರಿಗೆ ದಿಟ್ಟ ಉತ್ತರ ಕೊಟ್ಟರು ಎಂದರು.
ಅಂಬೇಡ್ಕರ್ ದೂರದೃಷ್ಟಿ ಮತ್ತು ವಿಚಾರ ಬಹಳ ಅಳವಾಗಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿರುವ ಸಂವಿಧಾನ ಯಶಸ್ವಿಯಾಗಿಲ್ಲ. ಆದರೆ, ನಮ್ಮ ದೇಶದ ಸಂವಿಧಾನ ಕೇವಲ ಅಧಿಕಾರದಲ್ಲಿ ಇರುವವರಿಗೆ ಅಧಿಕಾರ ಕೊಟ್ಟಿಲ್ಲ. ದೇಶದ ಪ್ರತಿಯೊಬ್ಬರಿಗೂ ಅಧಿಕಾರವನ್ನು ಕೊಟ್ಟಿದೆ ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಅಂಬೇಡ್ಕರ್ ಎಂದರೆ ದಂತಕಥೆ ಹಾಗೂ ಯುಗಪುರುಷ. ತುಳಿತಕ್ಕೆ ಒಳಗಾದ ಸಮಾಜದಲ್ಲಿ ಜನಿಸಿದ್ದ ಅಂಬೇಡ್ಕರ್ ಸ್ವತಃ ಅಪಮಾನ ಹಾಗೂ ಬಹಿಷ್ಕಾರಕ್ಕೆ ಒಳಗಾಗಿದ್ದವರು. ಅವರು ಹುಟ್ಟಿದ್ದರಿಂದ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ ಎಂದು ಸಿಎಂ ಹೇಳಿದರು.