ವ್ಯಾಕ್ಸಿನ್ ಕಳ್ಳಾಟ! ಲಸಿಕೆ ಪಡೆಯದವರಿಗೂ ಬರ್ತಿದೆ ಮೆಸೇಜ್: ಸಿಬ್ಬಂದಿ ಕರಾಮತ್ತು, ಹಿರಿಯರಿಗೆ ಆಪತ್ತು

Front 2
Published on

| ಸತೀಶ್ ಕಂದಗಲ್​ಪುರ ಬೆಂಗಳೂರು/ವಿ.ಕೆ.ರವೀಂದ್ರ ಕೊಪ್ಪಳ

ಕರೊನಾ ವಿರುದ್ಧ ಸೆಣೆಸುವ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆಯದವರಿಗೂ ‘ವ್ಯಾಕ್ಸಿನ್ ಪಡೆದಿದ್ದೀರಿ’ ಎಂದು ಮೊಬೈಲ್ ಮೆಸೇಜ್ ಬರುತ್ತಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿವೆ. ಇಷ್ಟೇ ಅಲ್ಲ. ಎರಡೂ ಡೋಸ್ ಪಡೆದ 6 ತಿಂಗಳ ಬಳಿಕ ಬೇರೊಂದು ಸ್ಥಳದಲ್ಲಿ 3ನೇ ಡೋಸ್ ಪಡೆದಿದ್ದೀರೆಂಬ ಪ್ರಮಾಣಪತ್ರವೂ ಸಿಗುತ್ತಿದೆ! ಇದೆಲ್ಲ ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡುವಿಕೆಯ ಜವಾಬ್ದಾರಿ ಹೊತ್ತಿರುವ ಆರೋಗ್ಯ ಸಿಬ್ಬಂದಿಯ ಕಳ್ಳಾಟ.

ಲಸಿಕೆ ನೀಡುವಿಕೆಯ ವೇಗ ಹೆಚ್ಚಿಸಿ ಎಲ್ಲರಿಗೂ ವ್ಯಾಕ್ಸಿನ್ ಹಾಕುವಂತೆ ಕೇಂದ್ರ ಸರ್ಕಾರ ಹೇರಿದ ಒತ್ತಡದಿಂದ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆ ಇಂತಹ ಕರಾಮತ್ತಿಗೆ ಕೈಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಲಕ್ಷಾಂತರ ವೃದ್ಧರು ಬೂಸ್ಟರ್ ಡೋಸ್ ಪಡೆಯಲಾಗದೆ ಪರದಾಡುವ ಪರಿಸ್ಥಿತಿ ಉದ್ಬವಿಸಿದೆ.

ಸುಳ್ಳು ಲೆಕ್ಕ: ರಾಜ್ಯದಲ್ಲಿ 2021ರ ಜ.16 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ವೃದ್ಧರು, ಸಹ-ಅಸ್ವಸ್ಥತೆ ಹೊಂದಿದವರು, 18ರಿಂದ 44 ವರ್ಷದೊಳಗಿನವರು ಹಾಗೂ 2022ರ ಜ.3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಈವರೆಗೆ 4.99 ಕೋಟಿ ಮೊದಲ ಡೋಸ್ ಮತ್ತು 3.97 ಕೋಟಿ 2ನೇ ಡೋಸ್ ಸೇರಿ ಒಟ್ಟು 8.96 ಕೋಟಿ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸುತ್ತಿದೆ. ಆದರೆ, ಅಕ್ಟೋಬರ್ ನಂತರ ಲಸಿಕೆ ಪಡೆಯದಿದ್ದರೂ ‘ನೀವು ಲಸಿಕೆ ಪಡೆದಿದ್ದೀರಿ’ ಎಂದು ಮೊಬೈಲ್​ಗೆ ಸಂದೇಶಗಳು ಬರುತ್ತಿವೆ. ಕೆಲವರು ಲಸಿಕೆ ಪಡೆಯದೇ ಎರಡನೇ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರ ತೋರಿಸಿ ಓಡಾಡುತ್ತಿದ್ದಾರೆ.

6 ತಿಂಗಳ ನಂತರ ಸಂದೇಶ: ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್​ನಲ್ಲಿ ಕೋವಿಶೀಲ್ಡ್ ಎರಡು ಡೋಸ್ ಲಸಿಕೆ ಪಡೆದ 10ಕ್ಕೂ ಅಧಿಕ ವೃದ್ಧರಿಗೆ, ‘ನೀವು ಅಕ್ಟೋಬರ್​ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2ನೇ ಡೋಸ್ ಲಸಿಕೆ ಪಡೆದಿದ್ದೀರಿ’ ಎಂದು ಪ್ರಮಾಣಪತ್ರ ಬರುತ್ತಿದೆ. ಇನ್ನೊಂದೆಡೆ, ಎರಡೂ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿ ಎಡವಟ್ಟಿನಿಂದಾಗಿ ಲಕ್ಷಾಂತರ ಮಂದಿ ವೃದ್ಧರು ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಹೊಂದಿದ್ದರೂ ಕೋವಿನ್ ಪೋರ್ಟಲ್​ನಲ್ಲಿ ಅನರ್ಹರೆಂದು ತೋರಿಸುತ್ತಿದೆ. ಬಹುತೇಕ ವೃದ್ಧರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು, ಬೂಸ್ಟರ್ ಡೋಸ್ ಪಡೆಯದ ವೇಳೆ ಸೋಂಕು ದೃಢಪಟ್ಟರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

1.5 ಲಕ್ಷ ಡೋಸ್ ವ್ಯರ್ಥ: ರಾಜ್ಯದಲ್ಲಿ ವಾಸ್ತವವಾಗಿ ಲಸಿಕೆ ಪೂರೈಕೆ, ನೀಡಿಕೆಯ ಬಗ್ಗೆ ಪೋರ್ಟಲ್ ಹಾಗೂ ಆಪ್​ನಲ್ಲಿ ದತ್ತಾಂಶಗಳ ವ್ಯತ್ಯಾಸ ಕಂಡುಬರುತ್ತಿದೆ. ಕೆಲವರಿಗೆ ಲಸಿಕೆ ನೀಡಿದರೂ ಮೊಬೈಲ್ ಇಲ್ಲದ್ದರಿಂದ ಪೋರ್ಟಲ್​ನಲ್ಲಿ ಹೆಸರು ನಮೂದಿಸದ ಕಾರಣ ದತ್ತಾಂಶದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ ಎಂದು ಆರೋಗ್ಯ ಇಲಾಖೆ ಸಮಜಾಯಿಷಿ ನೀಡುತ್ತಿದೆ. ಆದರೆ, ಈವರೆಗೆ ರಾಜ್ಯದಲ್ಲಿ 1.5 ಲಕ್ಷ ಡೋಸ್ ಕೋವ್ಯಾಕ್ಸಿನ್ ನಷ್ಟವಾಗಿರುವ ಮಾಹಿತಿಯಿದೆ. ಅದರಲ್ಲಿ ಕೊಪ್ಪಳ ಶೇ.3, ಬಳ್ಳಾರಿ ಶೇ.2.45 ಕೋವಿಶೀಲ್ಡ್ ಲಸಿಕೆ ಪೋಲಾಗಿದೆ. ಉಳಿದಂತೆ ಅತಿ ಹೆಚ್ಚು ಲಸಿಕೆ ಪೋಲಾದ ನಾಲ್ಕೈದು ಜಿಲ್ಲೆಗಳ ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.

ಆಧಾರ್ ಕೊಟ್ಟರೆ ಸರ್ಟಿಫಿಕೆಟ್: ಲಸಿಕೆ ಪಡೆಯದೆ ಸಂದೇಶ ಬರುತ್ತಿರುವುದಕ್ಕೆ ಪೂರಕವೆಂಬಂತೆ ಆರೋಗ್ಯ ಕಾರ್ಯಕರ್ತೆಯೊಬ್ಬರು, ವ್ಯಕ್ತಿಯೊಬ್ಬರೊಂದಿಗೆ ಸಂಭಾಷಣೆ ನಡೆಸಿದ ಆಡಿಯೋ ‘ವಿಜಯವಾಣಿ’ಗೆ ಲಭ್ಯವಾಗಿದೆ. ಇದರಲ್ಲಿ ವ್ಯಕ್ತಿ ತಾನು 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ಹೇಳಿದರೆ, ಆಧಾರ್ ಕಾರ್ಡ್ ನಂಬರ್ ಕಳಿಸಿ, ನಿಮಗೆ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಂತೆ ಮೆಸೇಜ್ ಬರುವಂತೆ ಮಾಡುವುದಾಗಿ ಕಾರ್ಯಕರ್ತೆ ಹೇಳಿದ್ದಾರೆ. ಲಸಿಕೆ ನೀಡದೆಯೂ ಅನೇಕರಿಗೆ ಇದೇ ಮಾದರಿಯಲ್ಲಿ ಸಂದೇಶ ಕಳಿಸುವ ಮಾರ್ಗವನ್ನು ಆರೋಗ್ಯ ಸಿಬ್ಬಂದಿ ಕಂಡುಕೊಂಡಿದ್ದಾರೆ ಎಂಬುದು ದೃಢವಾಗುತ್ತಿದೆ. ಜತೆಗೆ, ಪೋಲಾಗುತ್ತಿರುವ ಲಸಿಕೆ ಡೋಸ್​ಗಳನ್ನೇ ಜನರಿಗೆ ನೀಡಲಾಗಿದೆ ಎಂದು ತೋರಿಸಲಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಭೌತಿಕವಾಗಿ ಲಸಿಕೆ ನೀಡಿರುವ ಮತ್ತು ಲಸಿಕೆ ಪೋಲಾಗಿರುವ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಇಂದಿನಿಂದ ಬೂಸ್ಟರ್ ಡೋಸ್: ಈಗಾಗಲೇ 2 ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಪೂರ್ಣಗೊಂಡವರಿಗೆ ಜ.10 ರಿಂದ ಮುನ್ನೆಚ್ಚರಿಕಾ (ಬೂಸ್ಟರ್) ಡೋಸ್ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 6 ಲಕ್ಷ ಆರೋಗ್ಯ ಕಾರ್ಯಕರ್ತರು, 7 ಲಕ್ಷ ಮುಂಚೂಣಿ ಕಾರ್ಯಕರ್ತರು ಹಾಗೂ 8.60 ಲಕ್ಷ 60 ವರ್ಷ ಮೇಲ್ಪಟ್ಟ ವೃದ್ಧರು, ಸಹ-ಅಸ್ವಸ್ಥತೆ (ಕೋಮಾರ್ಬಿಟೀಸ್) ಹೊಂದಿರುವವರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮವಾರ 10 ಗಂಟೆಗೆ ಬೆಂಗಳೂರಿನ ಅಟಲ್​ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ತಪ್ಪು ಲೆಕ್ಕಕ್ಕೆ ಕಾರಣಗಳೇನು?

  • ಕೆಲವರ ಬಳಿ ಮೊಬೈಲ್, ಆಧಾರ್ ಕಾರ್ಡ್ ಇಲ್ಲ
  • ಕೇಂದ್ರದಿಂದ ಲಸಿಕೆ ಅಭಿಯಾನ ಪೂರ್ಣಕ್ಕೆ ಒತ್ತಡ
  • ಪ್ರತಿನಿತ್ಯ ಲಸಿಕೆ ನೀಡಿಕೆಗೆ ಟಾರ್ಗೆಟ್ ನೀಡುತ್ತಿರುವುದು
  • ಮನೆ-ಮನೆಗೆ ಹೋಗಿ ಲಸಿಕೆ ಕೊಡುವುದು
  • ದಿನದ ಕೊನೆಯಲ್ಲಿ ವೈಯಲ್​ನಲ್ಲಿ ಉಳಿಯುವ ಲಸಿಕೆ ಹೊಂದಾಣಿಕೆಗೆ ಪ್ರಯತ್ನ
  • ಲಸಿಕೆ ಪಡೆಯದ ಜನರನ್ನು ಪತ್ತೆಹಚ್ಚದೆ ಲಭ್ಯವಿರುವ ಮೊಬೈಲ್​ಗೆ ಸಂದೇಶ ರವಾನೆ
  • ಪೋರ್ಟಲ್​ನಲ್ಲಿನ ತಾಂತ್ರಿಕ ಸಮಸ್ಯೆ

ನಮ್ಮ ತಾತನಿಗೆ ಬೂಸ್ಟರ್ ಡೋಸ್ ಲಸಿಕೆ ಹಾಕಿಸಲು ನೋಂದಣಿ ಮಾಡಿಸುವ ಉದ್ದೇಶದಿಂದ ಪೋರ್ಟಲ್​ನಲ್ಲಿ ಪ್ರಮಾಣಪತ್ರ ಡೌನ್​ಲೋಡ್ ಮಾಡಿದಾಗ ತಪ್ಪಾದ ಮಾಹಿತಿ ಬಂದಿದೆ. ಹೀಗಾಗಿ, ಲಸಿಕೆ ಪಡೆಯುವ ಅವಧಿ ಬಂದಿದ್ದರೂ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. | ಕಾರ್ತಿಕ್ ಮೈಸೂರು

ಆತಂಕವೇಕೆ?

  • ಲಸಿಕೆ ಪಡೆಯದೆ ಸಂದೇಶ ಕಳಿಸಿದವರಿಗೆ ವ್ಯಾಕ್ಸಿನ್ ಪಡೆಯಲು ಸಮಸ್ಯೆ
  • ಸೋಂಕು ದೃಢಪಟ್ಟರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ, ತಪ್ಪಾದ ಸಂದೇಶದಿಂದ ಬೂಸ್ಟರ್ ಡೋಸ್ ಪಡೆಯಲು ಪರದಾಟ
  • ಸರ್ಕಾರಕ್ಕೆ ಅಂಕಿ-ಅಂಶ ಸರಿಪಡಿಸಲು ಸಮಸ್ಯೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net