

ಕೀರ್ತಿನಾರಾಯಣ ಸಿ. ಬೆಂಗಳೂರು
ಮೂರು ವರ್ಷದ ಹಿಂದೆ ಅಪ್ಪಳಿಸಿದ ಕೋವಿಡ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯನ್ನೇ ಲಾಭ ಮಾಡಿಕೊಂಡು ಹುಟ್ಟಿಕೊಂಡ ‘ಲೋನ್ ಆಪ್’ಗಳ ಹಾವಳಿ ಇನ್ನೂ ನಿಂತಿಲ್ಲ. ಕೆಲವೇ ನಿಮಿಷದಲ್ಲಿ ಸಾಲ ಕೊಟ್ಟು ಶೇ.30 ರಿಂದ ಶೇ.50ರವರೆಗೆ ಬಡ್ಡಿ ವಿಧಿಸುವ ಈ ಆಪ್ಗಳು, ಸಾಲ ಮರುಪಾವತಿ ನಂತರವೂ ಸಾಲ ಪಡೆದವರ ಮಾನ ತೆಗೆದು ಅವರು ಜೀವ ಕಳೆದುಕೊಳ್ಳುವಷ್ಟು ಕಿರುಕುಳ ನೀಡುತ್ತಿವೆ.
ದೇಶಾದ್ಯಂತ ಈ ಅನಧಿಕೃತ ಆಪ್ಗಳ ಜಾಲ ಹರಡಿವೆ. ಯಾರು? ಎಲ್ಲಿಂದ? ಹೇಗೆ? ನಿರ್ವಹಿಸುತ್ತಾರೆ ಎಂಬುದೇ ತಿಳಿಯದಂತೆ ಇಂಟರ್ನೆಟ್ನಲ್ಲೇ ಡಿಜಿಟಲ್ ಸಾಲ ಕೊಟ್ಟು ಕಿರುಕುಳ ಕೊಡುತ್ತಾರೆ. ಸೈಬರ್ ಪೊಲೀಸರು, ಆರ್ಬಿಐ ಹಾಗೂ ಬ್ಯಾಂಕ್ಗಳು ಹಲವು ರೀತಿಯಲ್ಲಿ ಲೋನ್ ಆಪ್ಗಳ ಜಾಲ ನಾಶಪಡಿಸಲು ಹಾಗೂ ವಂಚನೆಯಾಗದಂತೆ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡರೂ ಪೂರ್ಣಪ್ರಮಾಣದಲ್ಲಿ ಮಟ್ಟಹಾಕಲು ಸಾಧ್ಯ ವಾಗಿಲ್ಲ. ಗೂಗಲ್ ಸಂಸ್ಥೆ 2021ರಿಂದ 2022ರ ಜುಲೈವರೆಗೆ 3,500 ರಿಂದ 4,000 ಲೋನ್ ಆಪ್ಗಳನ್ನು ಪರಿಶೀಲನೆ ನಡೆಸಿದೆ. ಇದರಲ್ಲಿ ಅನಧಿಕೃತ ಅಥವಾ ಅನುಮಾನಾಸ್ಪದ ಎಂದು ಕಂಡುಬಂದ 2,500 ಆಪ್ಗಳನ್ನು ಪ್ಲೇ ಸ್ಟೋರ್ನಿಂದ ಶಾಶ್ವತವಾಗಿ ತೆಗೆದು ಹಾಕಿದೆ.
ಆದರೆ, ಇದೇ ಆಪ್ಗಳು ಸೋಷಿಯಲ್ ಮೀಡಿಯಾದ ಇನ್ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ಬುಕ್ ವೇದಿಕೆಗಳಲ್ಲಿ ಮರುಸೃಷ್ಟಿಯಾಗಿ ವಂಚನೆಯಲ್ಲಿ ನಿರತವಾಗಿವೆ. ಭಾರತೀಯ ಸೈಬರ್ ಅಪರಾಧ ಕೇಂದ್ರ ಹಾಗೂ ಗೃಹ ಸಚಿವಾಲಯ ಸಾಲದ ಆಪ್ಗಳ ಅಸಲಿಯತ್ತಿನ ಬಗ್ಗೆ ನಿಯಮಿತವಾಗಿ ವಿಶ್ಲೇಷಣೆ ಮಾಡುತ್ತಲೇ ಇದೆ. ಈ ವಿಶ್ಲೇಷಣೆ ವರದಿ ಹಾಗೂ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ದಾಖಲಾಗುವ ದೂರು ಆಧರಿಸಿ ಅನುಮಾನಾಸ್ಪದ ಆಪ್ಗಳನ್ನು ಬ್ಲಾಕ್ ಮಾಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಸೂಚನೆ ಕೊಡಲಾಗುತ್ತಿದೆ. ಇಷ್ಟೆಲ್ಲ ಎಚ್ಚರಿಕೆ ಕ್ರಮ ಕೈಗೊಂಡರೂ ವಂಚನೆ ಹಾಗೂ ಕಿರುಕುಳ ಮಾತ್ರ ತಪ್ಪಿಲ್ಲ.
ಟಾರ್ಚರ್ಗೆ ವಿದ್ಯಾರ್ಥಿ ಬಲಿ!: ಸಾಲದ ಆಪ್ ಕಿರುಕುಳಕ್ಕೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಆರನೇ ಸೆಮಿಸ್ಟರ್ ಓದುತ್ತಿದ್ದ ಯಶಸ್ 2023ರ ಜುಲೈನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಗೆಳೆಯನ ಆರ್ಥಿಕ ಸಂಕಷ್ಟ ತೀರಿಸಲು ಲೋನ್ ಆಪ್ಗಳಲ್ಲಿ ಸಾಲ ಪಡೆದಿದ್ದ. ಹಣ ಮರುಪಾವತಿ ಮಾಡದಿದ್ದಾಗ ಆಪ್ಗಳಿಂದ ಕಿರುಕುಳ ಆರಂಭವಾಗಿತ್ತು.
ಕಬಡ್ಡಿ ಆಟಗಾರ ಆತ್ಮಹತ್ಯೆ: ಪುತ್ತೂರಿನ ಕಬಡ್ಡಿ ಆಟಗಾರ ಸ್ವರಾಜ್ ಎಂಬ ಯುವಕ ಕಳೆದ ಸೆಪ್ಟೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಲ ಮರುಪಾವತಿಗೆ ನಾಳೆ ಮಧ್ಯಾಹ್ನವೇ ಡೆಡ್ಲೈನ್ ಎಂದು ಆಪ್ನವರು ಬ್ಲಾ್ಯಕ್ವೆುೕಲ್ ಮಾಡಿದ್ದರಿಂದ ನೇಣು ಹಾಕಿಕೊಂಡಿದ್ದ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಚೇರಿಯಲ್ಲೇ ಯುವಕ ಸೂಸೈಡ್: 2022ರ ಜ.10ರಂದು ಸುಶಾಂತ್ ಎಂಬಾತ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಲೋನ್ ಆಪ್ನವರು ಕರೆ ಮಾಡಿದರೆ ಮೃತಪಟ್ಟಿದ್ದಾಗಿ ಹೇಳಿ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದ.
ಟಾರ್ಚರ್ ಹೇಗೆ?: ಸಾಲ ಪಡೆದರೆ ಫೋನ್ಗಳಲ್ಲಿರುವ ಎಲ್ಲ ಕಾಂಟ್ಯಾಕ್ಟ್ ಗಳು ಆಪ್ ಆಪರೇಟರ್ಗೆ ಲಭ್ಯವಾಗುತ್ತವೆ. ?ಇಎಂಐ ಪಾವತಿ ವಿಳಂಬ ಅಥವಾ ಪಾವತಿಸಿದ ನಂತರವೂ ಕಿರುಕುಳ ಆರಂಭವಾಗುತ್ತದೆ. ?ಫೋನ್ನಲ್ಲಿರುವ ಕಾಂಟ್ಯಾಕ್ಟ್ ಲಿಸ್ಟ್ನ ಗ್ರೂಪ್ ಸೃಷ್ಟಿಸಿ, ಅಶ್ಲೀಲ ಫೋಟೋಗಳನ್ನು ಸೃಷ್ಟಿಸಿ ರವಾನೆ
ಆರ್ಬಿಐ ವೈಟ್ಲಿಸ್ಟ್!: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈಗಾಗಲೇ ‘ವೈಟ್ಲಿಸ್ಟ್’ ಲೋನ್ ಆಪ್ಗಳ ಪಟ್ಟಿಯನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಂಡಿದೆ. ವೈಟ್ಲಿಸ್ಟ್ ಎಂದರೆ ಕಾನೂನುಬದ್ಧವಾಗಿ ಸಾಲ ಕೊಟ್ಟು ವಸೂಲಿ ಮಾಡುವ ಆಪ್ಗಳು. ಇವು ಆರ್ಬಿಐನಲ್ಲಿ ನೋಂದಾಯಿತವಾಗಿವೆ. ಇದೇ ಪಟ್ಟಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಗೂಗಲ್ನೊಂದಿಗೆ ಹಂಚಿಕೊಂಡಿದೆ. ಈ ಪಟ್ಟಿಯ ಲ್ಲಿರುವ ಆಪ್ಗಳನ್ನು ಹೊರತುಪಡಿಸಿ ಉಳಿದ ಆಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆಯುವ ಕೆಲಸವನ್ನು ಗೂಗಲ್ ಮಾಡುತ್ತಿದೆ. ಇದಲ್ಲದೆ ಪ್ಲೇ ಸ್ಟೋರ್ನಲ್ಲಿ ಸಾಲದ ಅಪ್ಲಿಕೇಶನ್ಗಳ ಜಾರಿಗೊಳಿಸುವ ನೀತಿಯನ್ನು ಗೂಗಲ್ ನವೀಕರಿಸಿ, ಇನ್ನಷ್ಟು ಕಠಿಣ ಷರತ್ತುಗಳನ್ನು ವಿಧಿಸಿದೆ.