

ಕಾರವಾರ: ಉತ್ತರ ಕರ್ನಾಟಕ-ಕರಾವಳಿಯನ್ನು ಸುಲಭದಲ್ಲಿ ಬೆಸೆಯುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ವಣದ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ತಿರಸ್ಕಾರ ಮಾಡಿರುವುದು ಈ ಭಾಗದ ಜನರಲ್ಲಿ ಅಚ್ಚರಿಮೂಡಿಸಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ವಾರ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಮೂಲಸೌಕರ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಪರಿಸರಕ್ಕೆ ಹೆಚ್ಚು ಹಾನಿಯಾಗದಂತೆ ಯೋಜನೆ ಜಾರಿ ಮಾಡಬಹುದು ಎಂದು ಯೋಜನೆ ಪರವಾಗಿ ನಿಂತಿದ್ದರು. ಆದರೆ, ಪರಿಸರವಾದಿ ಪ್ರತಿನಿಧಿಗಳ ಆಕ್ಷೇಪ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲು ನಿರ್ಧರಿಸಲಾಯಿತು ಎಂಬ ಮಾಹಿತಿ ಇದೆ. ಹಿಂದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಅಂಗೀಕಾರ ನೀಡಿದ್ದ ಯೋಜನೆಗೆ ರಾಜ್ಯ ಬಿಜೆಪಿ ಸರ್ಕಾರ ಅಡ್ಡ ಬಂದಿರುವುದು ಕೌತುಕ ಹುಟ್ಟು ಹಾಕಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಣದ ಕೈಗಳು ಯಾವವು ಎಂಬ ಪ್ರಶ್ನೆಯೂ ಮೂಡಿದೆ. ವನ್ಯಜೀವಿ ಮಂಡಳಿಯ ಈ ನಿರ್ಣಯಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಶಿವರಾಮ ಹೆಬ್ಬಾರ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ‘ವನ್ಯಜೀವಿ ಮಂಡಳಿ’ಯ ನಡಾವಳಿ ಅಮಾನತಿನಲ್ಲಿಡಲಾಗಿದೆ ಎಂದು ತಿಳಿಸಲಾಗಿದೆ.
ಸುಣ್ಣ-ಬೆಣ್ಣೆ ಏಕೆ?
2010ರಲ್ಲಿ ಜಾರಿಯಾಗಿರುವ ಹೊಸಪೇಟೆ-ವಾಸ್ಕೊ ರೈಲು ಮಾರ್ಗ ದ್ವಿಪಥ ಕಾಮಗಾರಿ ಶೇ.70 ಪೂರ್ಣಗೊಂಡಿದೆ. ಈ ಯೋಜನೆಗಾಗಿ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದ 10.45 ಹೆಕ್ಟೇರ್ ಅರಣ್ಯ ನೇರವಾಗಿ ಹೋಗುತ್ತದೆ. ಅಲ್ಲದೆ, ಗೋವಾದ ಭಗವಾನ್ ಮಹಾವೀರ ಅಭಯಾರಣ್ಯದ 52 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸಲಾಗಿದೆ. ಅಲ್ಲಿ ತಿನೈಘಾಟ್ ವಲಯದಲ್ಲಿಯೇ ಲಕ್ಷಕ್ಕೂ ಅಧಿಕ ಮರಗಳನ್ನು ಕಡಿಯಬೇಕಿದೆ. ಈ ದ್ವಿಪಥ ರೈಲು ಮಾರ್ಗ ಯೋಜನೆಗೆ ಇಲ್ಲದ ವಿರೋಧ ನೇರವಾಗಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಬಾರದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೇಕೆ? ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣವೇ’ ಎಂಬುದು ಜನರ ಪ್ರಶ್ನೆ. ಹುಬ್ಬಳ್ಳಿ -ಅಂಕೋಲಾ ರೈಲು ಮಾರ್ಗಕ್ಕಾಗಿ 25 ವರ್ಷದ ಹಿಂದೆ ಮಾಡಿದ ಸರ್ವೆ ಆಧರಿಸಿ 2 ಲಕ್ಷಕ್ಕೂ ಅಧಿಕ ಮರ ನಾಶವಾಗುತ್ತದೆ ಎಂದು ವಾದಿಸುವುದು ಎಷ್ಟು ಸರಿ ಎಂಬುದು ಹುಬ್ಬಳ್ಳಿ-ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಸದಸ್ಯರ ಪ್ರಶ್ನೆ.
ಯೋಜನೆ ಏಕೆ ಬೇಕು?
ಸದ್ಯ ಕರ್ನಾಟಕದ ಘಟ್ಟದ ಮೇಲಿನ ಪ್ರದೇಶಗಳನ್ನು ನೇರವಾಗಿ ಕರಾವಳಿಯ ಬಂದರುಗಳಿಗೆ ಬೆಸೆಯಲು ಹಾಸನ-ಮಂಗಳೂರು ರೈಲು ಮಾರ್ಗ ಮಾತ್ರವಿದೆ. ಈ ಮಾರ್ಗದಲ್ಲಿ ಸಾಕಷ್ಟು ಕಡಿದಾದ ಘಟ್ಟ ಪ್ರದೇಶ ಇದೆ. ಇದರಿಂದ ರೈಲನ್ನು ಎಳೆಯಲು ಎರಡೆರಡು ಲೋಕೋಮೋಟಿವ್ ಇಂಜಿನ್ಗಳನ್ನು ಬಳಸಬೇಕಾಗುತ್ತದೆ. ಹಾಗಾಗಿ ಅಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲು ಸಾಧ್ಯವಿಲ್ಲ. ಮಂಗಳೂರು, ಕಾರವಾರ ಬಂದರಿಗೆ ಬರುವ ಪೆಟ್ರೋಲಿಯಂ ಉತ್ಪನ್ನಗಳನ್ನು ಘಟ್ಟದ ಮೇಲಿನ ಪ್ರದೇಶಗಳಿಗೆ ರಸ್ತೆ ಮಾರ್ಗದಲ್ಲಿ ಅಪಾಯಕಾರಿಯಾಗಿ ಸಾಗಿಸಬೇಕಿದೆ. ರಾಜ್ಯಕ್ಕೆ ರಸಗೊಬ್ಬರ, ಆಹಾರ ಧಾನ್ಯ, ಕಲ್ಲಿದ್ದಲು, ಕಬ್ಬಿಣದ ಅದಿರು ಸೇರಿ ಹಲವು ವಸ್ತುಗಳ ರಫ್ತು - ಆಮದಿಗೆ ಹಿನ್ನಡೆಯಾಗಿದೆ. ಇನ್ನು, ರಾಜ್ಯದ ಹೊಸಪೇಟೆಯಿಂದ ಪಕ್ಕದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಲೋಂಡಾ-ವಾಸ್ಕೋಡ ಗಾಮ ರೈಲು ಮಾರ್ಗವೂ ಇದೇ ಸ್ವರೂಪದ್ದಾಗಿದೆ. ಅಂಥ ಕಡಿದಾದ ಮಾರ್ಗದಲ್ಲೇ ಸದ್ಯ ಪ್ರತಿ ವರ್ಷ 8 ರಿಂದ 10 ಮಿಲಿಯನ್ ಟನ್ ವಹಿವಾಟು ನಡೆಯುತ್ತಿದೆ. ಆದರೆ, ರಾಜ್ಯದಲ್ಲಿ ವರ್ಷಕ್ಕೆ 20ರಿಂದ 30 ದಶಲಕ್ಷ ಟನ್ ಸರಕು ಪಶ್ಚಿಮ ಕರಾವಳಿಯ ಬಂದರುಗಳ ಮೂಲಕ ನಡೆಯುವ ಅವಕಾಶವಿದೆ. ಇದೆಲ್ಲದಕ್ಕೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವೊಂದೇ ಸುಲಭ ಉಪಾಯ ಎಂದು ನೈಋತ್ಯ ರೈಲ್ವೆಯ ಡೆಪ್ಯೂಟಿ ಚೀಫ್ ಇಂಜಿನಿಯರ್ ಒಬ್ಬರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಸದ್ಯ ಸಾಗರಮಾಲಾ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವ ಬೇಲೆಕೇರಿ, ಕಾರವಾರ ಬಂದರುಗಳ ವಹಿವಾಟು ದ್ವಿಗುಣಗೊಳ್ಳಲೂ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿಯಾಗಬೇಕು ಎಂಬುದು ಅವರ ಅಭಿಪ್ರಾಯ.
ವಾಜಪೇಯಿ ಅವರಿಂದ ಶಂಕುಸ್ಥಾಪನೆ
164 ಕಿಮೀ ದೂರದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ 1951 ರಲ್ಲಿ ಯೋಜನೆ ರೂಪಿಸಲಾಯಿತು. 1996ರಲ್ಲಿ ಭಾರತೀಯ ರೈಲ್ವೆ ಮಂಡಳಿಯು ಯೋಜನೆಗೆ ಅನುಮೋದನೆ ನೀಡಿತು. ಯೋಜನೆಗೆ 1384 ಹೆಕ್ಟೇರ್ ಭೂಮಿ ಬೇಕು ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 965 ಹೆಕ್ಟೇರ್ ಅರಣ್ಯ ಭೂಮಿಯಾಗಿತ್ತು. ಅರಣ್ಯ ಹಾನಿಯ ಪ್ರಮಾಣವನ್ನು 667 ಹೆಕ್ಟೇರ್ಗೆ ಇಳಿಸಿದ ನಂತರ ಕಾಮಗಾರಿಗೆ ಪರಿಸರ ಅನುಮತಿ ದೊರೆತಿತ್ತು. 1999ರ ಜೂನ್ 6 ರಂದು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಲಘಟಗಿವರೆಗೆ ಸುಮಾರು 46 ಕಿಮೀ ಕಾಮಗಾರಿಯೂ ನಡೆದಿತ್ತು. ಆದರೆ, ಯೋಜನೆಯಿಂದ ಮರಗಳ ನಾಶದ ಬಗ್ಗೆ ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರ ಹಾಗೂ ಬೆಂಗಳೂರಿನ ವೈಲ್ಡ್ಲೈಫ್ ಕ್ಲಬ್ಗಳು ಸುಪ್ರೀಂ ಕೋರ್ಟ್ ಹಸಿರು ಪೀಠದ ಮೊರೆ ಹೋಗಿದ್ದವು. ಸುಪ್ರೀಂ ಕೋರ್ಟ್ನಿಂದ ರಚಿತವಾದ ಕೇಂದ್ರೀಯ ಉನ್ನತಾಧಿಕಾರ ಸಮಿತಿ(ಸಿಇಸಿ) ಯೋಜನೆ ಸಾಧುವಲ್ಲ ಎಂದು ಅಭಿಪ್ರಾಯಪಟ್ಟಿದ್ದರಿಂದ 2006ರಲ್ಲಿ ಕಾಮಗಾರಿ ಅರ್ಧಕ್ಕೇ ನಿಂತಿತು. ಈ ಕುರಿತು ಹಲವು ಸಮಿತಿ ವರದಿ ಪರಿಶೀಲಿಸಿ, ವಿಚಾರಣೆಗಳ ನಂತರ 2016ರ ಫೆ. 10ರಂದು ಸುಪ್ರೀಂ ಕೋರ್ಟ್ನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್ಜಿಟಿ) ತೀರ್ಪು ನೀಡಿ, ‘ಇದು ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ಬಿಟ್ಟ ವಿಚಾರ. ನಿಯಮದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಪರಿಸರ ಮಂತ್ರಾಲಯ ಅನುಮೋದನೆ ನೀಡಿದರೆ ತನ್ನದೇನೂ ಅಭ್ಯಂತರವಿಲ್ಲ’ ಎಂದಿತ್ತು. ರೈಲ್ವೆ ಇಲಾಖೆ ಹೊಸದಾಗಿ ಯೋಜನೆ ರೂಪಿಸಿ ರಾಜ್ಯ ಸರ್ಕಾರಕ್ಕೆ, ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಯೋಜನೆಗೆ 2018 ರಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ), ಈಗ ರಾಜ್ಯ ವನ್ಯಜೀವಿ ಮಂಡಳಿ (ಕೆಎಸ್ಡಬ್ಲ್ಯುಬಿ) ಆಕ್ಷೇಪಿಸಿದೆ.
ನಷ್ಟ ಕಡಿಮೆ, ಲಾಭ ಹೆಚ್ಚು
‘ಪಶ್ಚಿಮ ಘಟ್ಟ ಹೊಸ ಯೋಜನೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಆದರೆ, ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಹೇಳುವುದಾದರೆ, ಈಗ ಉಳಿದಿರುವುದು ಹುಬ್ಬಳ್ಳಿ-ಅಂಕೋಲಾ ಯೋಜನೆ ಮಾತ್ರ. ತಾಳಗುಪ್ಪ-ಹೊನ್ನಾವರ ರೈಲು ಯೋಜನೆ ಅಥವಾ ರಾಷ್ಟ್ರೀಯ ಹೆದ್ದಾರಿ 63 ಅನ್ನು ಚತುಷ್ಪಥವಾಗಿ ವಿಸ್ತರಿಸುವ ಯೋಜನೆಗಳು ಬೇಡವೇ ಬೇಡ. ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯನ್ನು ಜಾರಿ ಮಾಡಬಹುದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಸಿ) ಡಾ.ಟಿ.ವಿ.ರಾಮಚಂದ್ರ ನೇತೃತ್ವದ ವಿಜ್ಞಾನಿಗಳ ತಂಡ 2012 ರಲ್ಲಿ ಅಧ್ಯಯನ ವರದಿಯೊಂದನ್ನು ನೀಡಿತ್ತು. ಇಷ್ಟಿದ್ದಾಗೂ ಯೋಜನೆ ಜಾರಿಗೆ ಹಿಂಜರಿಕೆ ಏಕೆ ಎಂಬುದು ಜನರ ಪ್ರಶ್ನೆಯಾಗಿದೆ.
ಉತ್ತರ ಕರ್ನಾಟಕ ಕರಾವಳಿ ಉದ್ಯಮ, ಪ್ರವಾಸಿ ಚಟುವಟಿಕೆ ಅಭಿವೃದ್ಧಿಗೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಪೂರಕವಾಗಿದೆ. ಕೆಲ ಪರಿಸರವಾದಿಗಳು ವಿರೋಧಿಸಿದರು ಎಂಬ ಮಾತ್ರಕ್ಕೆ ಯೋಜನೆ ಜಾರಿ ಮಾಡದೇ ಇರುವುದು ಸರಿಯಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿ, ರಾಜ್ಯ ವನ್ಯಜೀವಿ ಮಂಡಳಿಯ ನಿರ್ಣಯವನ್ನು ವಾಪಸ್ ಪಡೆಯುವಂತೆ ಮನವಿ ಮಾಡಲಾಗುವುದು. | ಶಿವರಾಮ ಹೆಬ್ಬಾರ ಕಾರ್ವಿುಕ ಸಚಿವ
ಸುಭಾಷ್ ಧೂಪದಹೊಂಡ