

ಶಿವು ಹುಣಸೂರು
ಹನ್ನೆರಡನೇ ಶತಮಾನದ ಬಸವಾದಿ ಶರಣರು ಮರಣವೇ ಮಹಾನವಮಿ ಎಂದರು. ಆದರೆ, ಇಂದು ಆ ಮಹಾನವಮಿಯನ್ನು ಆಚರಿಸಲು ಶೋಷಿತರಿಗೆ ಇಲ್ಲಿ ಸ್ಮಶಾನವೇ ಇಲ್ಲ ಎನ್ನುವಂತಾಗಿದೆ. ಶರಣರು ಇವ ನಮ್ಮವ ಇವ ನಮ್ಮವ ಎಂದರು. ಆದರೆ ಇಂದು ಹೂಳಲೂ ಜಾಗ ಕೊಡದೇ ಇವನಾರವ ಇವನಾರವ ಎನ್ನುವ ಸಂದರ್ಭಗಳೇ ಹೆಚ್ಚಾಗಿವೆ.
ಎರಡು ದಶಕಗಳಿಂದ ತಾಲೂಕಿನಲ್ಲಿ ಸ್ಮಶಾನಗಳ ಅಭಿವೃದ್ಧಿಗಾಗಿ ಶೋಷಿತ ಸಮುದಾಯ ಮತ್ತು ತಾಲೂಕು ಆಡಳಿತದ ಜಟಾಪಟಿ ನಡೆಯುತ್ತಲೇ ಇದೆ. ಶರಣರು ತಿಳಿಸಿದ ಜೀವನಾದರ್ಶಗಳು ಇಲ್ಲಿ ಮರೆಯಾಗಿವೆ. ಜೀವಂತವಿದ್ದಾಗಲೂ ಶೋಷಿಸುವ ನಮ್ಮನ್ನು ಸತ್ತ ಮೇಲಾದರೂ ನೆಮ್ಮದಿಯಾಗಿ ಮುಕ್ತಿ ಕಾಣಲು ಸಮಾಜ ಮತ್ತು ಆಡಳಿತ ಬಿಡುತ್ತಿಲ್ಲವೆನ್ನುವ ಕೊರಗು ದಲಿತ ಸಮುದಾಯವನ್ನು ಕಾಡುತ್ತಲೇ ಇದೆ.
ತಾಲೂಕು ಮತ್ತು ಹುಣಸೂರು ಉಪವಿಭಾಗ ಮಟ್ಟದ ಯಾವುದೇ ಸಭೆಗಳಾಗಲೀ, ಸಾಮಾನ್ಯ ಸಭೆ, ಪ್ರಗತಿಪರಿಶೀಲನಾ ಸಭೆ, ಎಸ್‌ಸಿ ಎಸ್ಟಿ ಹಿತರಕ್ಷಣಾ, ಜಾಗೃತಿ ಸಭೆಗಳಲ್ಲಿ, ಪೊಲೀಸ್ ಇಲಾಖೆ ಆಯೋಜಿಸುವ ಕುಂದುಕೊರತೆ ಸಭೆಯಲ್ಲಿ ಸ್ಮಶಾನದ ಕೊರತೆಗಳ ಕುರಿತು ಚರ್ಚಿಸದ ಸಭೆಯೇ ಇಲ್ಲ ಎನ್ನಬಹುದು. ಇಷ್ಟಾದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.
ಪ್ರಸ್ತುತ ಪರಿಸ್ಥಿತಿ ಏನಿದೆ?: ತಾಲೂಕು ಆಡಳಿತದ ಪ್ರಕಾರ ಹುಣಸೂರು ತಾಲೂಕಿನ 211 ಗ್ರಾಮ(ಬೇಚರಾಕ್ ಗ್ರಾಮಗಳನ್ನು ಹೊರತುಪಡಿಸಿ)ಗಳಲ್ಲಿ ಒಟ್ಟು 207 ಸ್ಮಶಾನಗಳಿವೆ. ಬಿಳಿಕೆರೆ ಹೋಬಳಿ ವ್ಯಾಪ್ತಿಯಲ್ಲಿ 61, ಗಾವಡಗೆರೆಯಲ್ಲಿ 37, ಹನಗೋಡು ಹೋಬಳಿಯಲ್ಲಿ 70 ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 38 ಸ್ಮಶಾನಗಳಿವೆ. 2014ರಲ್ಲಿ ಅಂದಿನ ರಾಜ್ಯ ಸರ್ಕಾರ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಜಾತಿ ಎಂಬ ಮೌಢ್ಯದಿಂದ ಹೊರಬರಲು ಸಾಧ್ಯವಾಗದಿದ್ದರೂ ಕನಿಷ್ಟ ಆತನ ಅಂತ್ಯಕ್ರಿಯೆ ಸಮಯದಲ್ಲಾದರೂ ಸಾರ್ವಜನಿಕ ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವ ಮೂಲಕ ಯಾವುದೇ ಜಾತಿ ಬೇಧಗಳಿಲ್ಲದೆ ಎಲ್ಲರೂ ಒಂದೇ ಎಂಬ ಮನುಕುಲದ ತತ್ವವನ್ನು ಅರ್ಥ ಮಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಅಧಿಕೃತ ಮುದ್ರೆ ನೀಡಿತು. ಸಾರ್ವಜನಿಕ ಸ್ಮಶಾನಗಳಲ್ಲಿಯೇ ಪರಿಶಿಷ್ಟರೂ ಅಂತ್ಯಸಂಸ್ಕಾರದ ಬಳಕೆಗೆ ಅವಕಾಶ ನೀಡಿತು. ಅಲ್ಲದೇ 2014ಕ್ಕೂ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿ ನಿರ್ಮಾಣಗೊಂಡಿದ್ದ ಸ್ಮಶಾನಗಳನ್ನು ಹಾಗೆಯೇ ಉಳಿಸಿಕೊಳ್ಳಲು ಆದೇಶ ನೀಡಿತು.
ತಾಲೂಕಿನಲ್ಲಿ 2014ಕ್ಕೂ ಮುನ್ನ ಒಟ್ಟು 15 ಸ್ಮಶಾನಗಳನ್ನು ಪರಿಶಿಷ್ಟ ಜಾತಿ ಜನಾಂಗಕ್ಕೆ ಮೀಸಲಿರಿಸಲಾಗಿತ್ತು. ಆದರೆ, ಕಾಲಕಳೆದಂತೆ ಜನಸಂಖ್ಯೆ ಏರುತ್ತಲೇ ಸಮಸ್ಯೆಗಳು ಉಲ್ಬಣಗೊಳ್ಳಲು ಆರಂಭಗೊಂಡಿದೆ. ಪ್ರಸ್ತುತ ತಾಲೂಕಿನ 170 ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಸ್ಮಶಾನದ ಕೊರತೆ ತೀವ್ರವಾಗಿ ಕಾಡುತ್ತಿದೆ ಎನ್ನುವುದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಆರೋಪವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 29 ಸ್ಮಶಾನಗಳನ್ನು 1 ಕೋಟಿ 17 ಲಕ್ಷ ರೂ.ಗಳ ವೆಚ್ಚದಡಿ 19730 ಮಾನವ ಸೃಜನೆಯೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ ಎಂದು ತಾ.ಪಂ.ಇಒ ಬಿ.ಕೆ.ಮನು ತಿಳಿಸಿದರು.
ಮನಕಲಕುವ ನಿದರ್ಶನಗಳಿವೆ: ಕಟ್ಟೆಮಳಲವಾಡಿ ನದಿತಟದಲ್ಲಿ ಸ್ಮಶಾನವಿದ್ದು, ಭೂಮಿಯಲ್ಲಿ ನೀರಿನ ಸೆಲೆ ಸದಾ ಕಾಲ ಇರುವ ಕಾರಣ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗಿದೆ. ತಾಲೂಕಿನ ಹರವೆ ಗ್ರಾಮದಲ್ಲಿ ದಾರ ಬಟ್ಟೆ ಪಿನ್ನು ಮಾರಿ ಜೀವನ ನಡೆಸುತ್ತಿದ್ದ ಗೋವಿಂದ ಮೃತಪಟ್ಟಾಗ ಆ ಗ್ರಾಮದಲ್ಲಿ ಆತನ ಶವಸಂಸ್ಕಾರಕ್ಕೆ ಅವಕಾಶ ಸಿಗಲಿಲ್ಲ. ದಲಿತ ಮುಖಂಡರು ಆತನ ಶವವನ್ನು ಮಧ್ಯರಾತ್ರಿವೇಳೆ ನಗರದ ಚಿರಶಾಂತಿಧಾಮಕ್ಕೆ ತಂದು ಅಂತ್ಯಸಂಸ್ಕಾರ ಮಾಡುತ್ತಾರೆ. ಮಾಚಬಾಯನಹಳ್ಳಿಯಲ್ಲಿ ಮಾದಿಗ ಸಮಾಜದ ಮಾಚಯ್ಯ ಮೃತಪಟ್ಟಾಗ ಸ್ಮಶಾನಕ್ಕೆ ಹೋಗುವ ದಾರಿಯಿಲ್ಲದೇ ರಸ್ತೆಯ ಬದಿ ಸಂಸ್ಕಾರ ನಡಸಿದ್ದಾರೆ. ದೊಡ್ಡಹೆಜ್ಜೂರಿನಲ್ಲಿ ದಲಿತರಿಗೆ ಸ್ಮಶಾನವೇ ಇಲ್ಲ ಎನ್ನಲಾಗುತ್ತಿದೆ. ನಾಡಪ್ಪನಹಳ್ಳಿಯಲ್ಲಿ 50ಕ್ಕೂ ಹೆಚ್ಚು ಪೌರಕಾರ್ಮಿಕ ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳು ಕಳೆದ 50 ವರ್ಷಗಳಿಂದ ವಾಸವಿದ್ದರೂ ಇಂದಿಗೂ ಸ್ಮಶಾನವಿಲ್ಲದೆ ಅಂತ್ಯಸಂಸ್ಕಾರವನ್ನು ಕಂಡಕಂಡಲ್ಲಿ ಮಾಡುತ್ತಿದ್ದಾರೆ. ನಾಗರಹೊಳೆಯ ಕಾಡಂಚಿನ ಚಂದನಗಿರಿ ಕೊಪ್ಪಲು ಗ್ರಾಮದ ಜನರು ಅಂತ್ಯಸಂಸ್ಕಾರಕ್ಕೆ ಕಾಡಿನ ಬದಿಗೆ ಹೋದರೆ ಅರಣ್ಯ ಇಲಾಖೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ.
ಹೋರಾಟಗಾರರ ದೌರ್ಬಲ್ಯವೂ ಹೌದು: 20 ವರ್ಷಗಳಿಂದ ಸ್ಮಶಾನಕ್ಕಾಗಿ ಹೋರಾಟ ನಡೆಸುವ ಶೋಷಿತ ಸಮಾಜದ ಮುಖಂಡರು ಬರೀ ಸಭೆ ಸಮಾರಂಭಗಳಲ್ಲಿ ಸಮಸ್ಯೆಯನ್ನು ಅನಾವರಣಗೊಳಿಸಿ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಸುಮ್ಮನಾಗುತ್ತಿದ್ದಾರೆ. ಸಮಸ್ಯೆಯ ಪರಿಹಾರಕ್ಕಾಗಿ ತಾಲೂಕು ಆಡಳಿತದೊಂದಿಗೆ ಸತತ ಸಂಪರ್ಕ ಇಟ್ಟುಕೊಂಡು ಹೋರಾಟ, ಚಳವಳಿಯಂತಹ ಕಾರ್ಯಗಳನ್ನು ನಡಸದಿರುವುದೂ ಕೂಡ ಸಮಸ್ಯೆ ಪರಿಹಾರವಾಗದೇ ಇರಲು ಕಾರಣವೆಂದು ಕೆಲ ಹೋರಾಟಗಾರರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.
ಅಧಿಕಾರಿಗಳ ಬದ್ಧತೆಯ ಕೊರತೆ: ಇನ್ನು ಅಧಿಕಾರಿವರ್ಗ ಎರಡು ದಶಕಗಳಿಂದ ಈ ಸಮಸ್ಯೆಗಳನ್ನು ಇಟ್ಟುಕೊಂಡು ಬರುವ ಅವಶ್ಯಕತೆಯಿರಲಿಲ್ಲವೆನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ನರೇಗಾದಂತಹ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳುವ ಅಗತ್ಯವಿದೆ. ಬಹುತೇಕ ಸ್ಮಶಾನಗಳಿಗೆ ಮೂಲಸೌಕರ್ಯದ ಕೊರತಯೇ ಎದ್ದುಕಾಣುತ್ತಿದೆ. ಕನಿಷ್ಟಪಕ್ಷ ತಂತಿಬೇಲಿ, ನೀರಿನ ವ್ಯವಸ್ಥೆ, ವಿದ್ಯುತ್ ಸರಬರಾಜು, ಸೂಕ್ತ ಸಂಪರ್ಕ ರಸ್ತೆ ಇದ್ಯಾವುದೇ ವ್ಯವಸ್ಥೆ ಇಲ್ಲದಿರುವಾಗ ಅಂತ್ಯಕ್ರಿಯೆ ನೆಡಸುವುದಾದರೂ ಹೇಗೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಒತ್ತುವರಿ, ದಾರಿ ಸಮಸ್ಯೆಗಳನ್ನು ಪರಿಹರಿಸಬೇಕಾದ ಕಂದಾಯ ಇಲಾಖೆ ಸಮಸ್ಯೆ ಬಿಗಡಾಯಿಸಿದೆ ಎಂದು ಕುಳಿತರೆ ಪರಿಹಾರವಾಗುವುದಾದರೂ ಹೇಗೆ? ಮನವೊಲಿಕೆ ಕಾನೂನಾತ್ಮಕ ಕ್ರಮಗಳನ್ನು ಅನುಸರಿಸುವ ಉಪಕ್ರಮಗಳಿಗೆ ತಾಲೂಕು ಆಡಳಿತ ಏಕೆ ಮುಂದಾಗುತ್ತಿಲ್ಲವೆಂದು ವಕೀಲ ಪುಟ್ಟರಾಜು ಪ್ರಶ್ನಿಸುತ್ತಾರೆ.
ಹೊಸೂರು ಕೊಡಗು ಕಾಲನಿ ಮಾದರಿ: ತಾಲೂಕಿನಾದ್ಯಂತ ಸ್ಮಶಾನಗಳ ಸಮಸ್ಯೆ ಕಾಡುತ್ತಿರುವಾಗ ಹೊಸೂರು ಕೊಡಗು ಕಾಲನಿ ಮಾತ್ರ ಇದಕ್ಕೆ ಅಪವಾದ ಎನ್ನುವಂತೆ 12 ವರ್ಷಗಳ ಹಿಂದೆಯೇ ಸಾರ್ವಜನಿಕ ಸ್ಮಶಾನದ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದಾರೆ. ರೈತಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ನೇತೃತ್ವದಲ್ಲಿ ಇಡೀ ಗ್ರಾಮದ ಎಲ್ಲ ಜನಾಂಗದವರೂ ಗ್ರಾಮದಲ್ಲಿರುವ ಸ್ಮಶಾನವೊಂದರಲ್ಲೇ ಅಂತ್ಯಕ್ರಿಯೆಯನ್ನು ನಡೆಸುತ್ತಿದ್ದಾರೆ. ಆರಂಭದಲ್ಲಿ ಅಲ್ಪಪ್ರಮಾಣದ ವಿರೋಧ ವ್ಯಕ್ತವಾದರೂ ಕಾಲಾನುಕ್ರಮದಲ್ಲಿ ಎಲ್ಲವನ್ನೂ ಜನರು ಮರೆತು ಒಂದಾಗಿ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ ಎಂದು ಹೊಸೂರು ಕುಮಾರ್ ಸಂತಸ ವ್ಯಕ್ತಪಡಿಸುತ್ತಾರೆ.
ಮೂಲ ಸೌಕರ್ಯಗಳಿಲ್ಲ: ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 16 ಸ್ಮಶಾನಗಳಿವೆ. ಯಾವುದರಲ್ಲೂ ಮೂಲಸೌಕರ್ಯಗಳಿಲ್ಲ. ವಿಚಿತ್ರವೆಂದರೆ ನಗರದ ಹೃದಯ ಭಾಗದ ಚಿರಶಾಂತಿ ಧಾಮದ ವಿಸ್ತೀರ್ಣ ಎಷ್ಟಿದೆ ಎನ್ನುವುದೇ ನಗರಸಭೆಗೆ ತಿಳಿದಿಲ್ಲ. ಅಲ್ಲದೆ ದೇವಿಪ್ರಸಾದ್ ಹೋಟೆಲ್ ಹಿಂಭಾಗ, ಕಾಫಿವರ್ಕ್ಸ್ ಕ್ರಿಶ್ಚಿಯನ್ ಸ್ಮಶಾನ, ಚಿಕ್ಕಹುಣಸೂರು(ಹಳೆಯೂರು), ವಿಪಿಬೋರೆ ದರ್ಗಾ ರಸ್ತೆಯ ಸ್ಮಶಾನ, ಡಿಎಲ್ ಬಾರ್ ಹಿಂಭಾಗದ ಸ್ಮಶಾನಗಳ ವಿಸ್ತೀರ್ಣವೆಷ್ಟು ಎನ್ನುವುದೇ ನಗರಸಭೆಗೆ ಗೊತ್ತಿಲ್ಲ. ಹೀಗಿರುವಾಗ ಅಭಿವೃದ್ಧಿಯನ್ನಾದರೂ ಹೇಗೆ ಮಾಡುತ್ತಾರೆ. ಈವರೆಗೆ ಒಟ್ಟು 26 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ಪೌರಾಯುಕ್ತೆ ಕೆ.ಮಾನಸ ತಿಳಿಸುತ್ತಾರೆ.