

ನಂಜನಗೂಡು: ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ನಂಜನಗೂಡಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಮುಂಜಾನೆಯಿಂದಲೇ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ತರಕಾರಿ ವ್ಯಾಪಾರ ಮುಂಜಾನೆಗಷ್ಟೇ ಸೀಮಿತವಾಗಿತ್ತು. ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಬಜಾರ್ ರಸ್ತೆ, ಅಂಗಡಿ ಬೀದಿ, ರಾಷ್ಟ್ರಪತಿ ರಸ್ತೆ, ಎಂಜಿಎಸ್ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ ಹಾಗೂ ಹಳೇ ನಿಲ್ದಾಣ ಸಂಪೂರ್ಣ ಸ್ತಬ್ಧಗೊಂಡಿತ್ತು. ಮೆಡಿಕಲ್, ಹಾಲಿನ ಕೇಂದ್ರಗಳು, ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದವು. ಆದರೆ ಕೆಲವು ಬ್ಯಾಂಕ್‌ಗಳುಮುಚ್ಚಿದ್ದರಿಂದ ಗ್ರಾಹಕರು ಪರದಾಡುವಂತಾಯಿತು.
ಹುಣ್ಣಿಮೆ ದಿನವಾದ ಶುಕ್ರವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. ಸಾರಿಗೆ ಬಸ್ ಸಂಚಾರವಿಲ್ಲದೆ ಸ್ವಂತ ವಾಹನಗಳಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆಯುತ್ತಿದ್ದದ್ದು ಕಂಡುಬಂತು.
ಮೆರವಣಿಗೆ ರ‌್ಯಾಲಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವಂತೆ ಆಗ್ರಹಿಸಿ ವಿವಿಧ ಕನ್ನಡಪರ, ರೈತಪರ, ದಲಿತಪರ ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತಸಂಘ, ದಸಂಸ ಹಾಗೂ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಮೈಸೂರು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಾವೇಶಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕಾರ್ಯ ಬಸವಣ್ಣ, ರೈತಸಂಘದ ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಂಠು, ಕಾರ್ಯದರ್ಶಿ ಮುಳ್ಳೂರು ಸಿದ್ದರಾಜು, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಮುಳ್ಳೂರು ಸ್ವಾಮಿ, ಹೆಜ್ಜಿಗೆ ಪ್ರಕಾಶ್, ಗೋಳೂರು ಸ್ನೇಕ್ ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.