

ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ)ಯಲ್ಲಿ ತೊಡಗಿಕೊಂಡ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಮೊದಲ ಕಂತಿನ ಗೌರವಧನ ತಲಾ ಐದು ಸಾವಿರ ರೂ. ಬಿಡುಗಡೆ ಆದೇಶ ಕಾಗದದಲ್ಲೇ ಉಳಿದಿರುವುದು ಬೆಳಕಿಗೆ ಬಂದಿದೆ.
ಸಮೀಕ್ಷೆ ಶುರುವಾರ ನಾಲ್ಕು ದಿನಗಳಲ್ಲೇ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ಮೊದಲ ಕಂತಿನಲ್ಲಿ ತಲಾ ಐದು ಸಾವಿರ ರೂ.ನಂತೆ 1.20 ಲಕ್ಷ ಸಮೀಕ್ಷಾಗಾರರಿಗೆ ಒಟ್ಟು 60.36 ಕೋಟಿ ರೂ. ಬಿಡುಗಡೆ ಆದೇಶ ಹೊರಡಿಸಿ, ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿತ್ತು.
ಸಮೀಕ್ಷೆಗೆ ವಿಧಿಸಿದ್ದ ಕಾಲಮಿತಿ ಮಂಗಳವಾರ ಕೊನೆಗೊಳ್ಳಲಿದೆ. ಸಮೀಕ್ಷೆ ಮುಂದುವರಿಸುವ ಜತೆಗೆ ಶಾಲಾ ತರಗತಿ ನಡೆಸುವ ರೀತಿಯಲ್ಲಿ ವೇಳಾಪಟ್ಟಿ ಗೊತ್ತುಪಡಿಸಿಯಾಗಿದೆ. ಆದರೆ ಬಿಡುಗಡೆ ಆದೇಶ ಪ್ರಕಾರ ಗಣತಿದಾರರು, ಮೇಲ್ವಿಚಾರಕರಿಗೆ ಗೌರವಧನ ಪಾವತಿಯಾಗಿದ್ದರ ಬಗ್ಗೆ ಅತ್ತ ಆಯೋಗ, ಇತ್ತ ಇಲಾಖೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಲಾಗುತ್ತಿದೆ.
ಸಮೀಕ್ಷೆಗೆ ನಿಗದಿತ ಗೌರವಧನ ಬಿಡುಗಡೆಯಾಗುವುದಿಲ್ಲ. ಪರಿಶಿಷ್ಟ ಜಾತಿ ಒಳಮೀಸಲಾತಿಗೆ ನಡೆಸಿದ ಸಮೀಕ್ಷೆಯ ಗೌರವಧನ ಬಾಕಿಯಿದೆ. ಇದೇ ಕಾರಣಕ್ಕೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ದೂರುಗಳನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ, ತಕ್ಷಣಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆಗೆ ವ್ಯವಸ್ಥೆ ಮಾಡಿದ್ದರು.
ಸಕಾಲದಲ್ಲಿ ಗೌರವಧನ ಪಾವತಿಯಾಗುತ್ತದೆ. ಶಿಕ್ಷಕರಿಗೆ ಯಾವುದೇ ಸಂಶಯ ಬೇಡವೆಂದು ಸಿಎಂ ಸಿದ್ದರಾಮಯ್ಯ ಸ್ವತಃ ಅಭಯ ನೀಡಿದ್ದರು. ಆದರೂ ಬಿಡುಗಡೆಯಾದ ಆದೇಶ ಹೊರ ಬಿದ್ದಿದೆಯೇ ಹೊರತು ಗೌರವಧನ ಖಾತೆಗೆ ಜಮೆಯಾಗಿಲ್ಲವೆಂದು ಗಣತಿದಾರರು, ಮೇಲ್ವಿಚಾರಕರು ಬೇಸರ ಹೊರ ಹಾಕಿದ್ದಾರೆ.
ಚಾಲ್ತಿ ಸಮೀಕ್ಷೆಗೆ ಮೊದಲ ಕಂತಿನ ಗೌರವಧನ ಪಾವತಿಗೆ ಹಣ ಬಿಡುಗಡೆ ಆದೇಶ ಹೊರಡಿಸಿದ್ದು, ಯಾವೊಬ್ಬ ಸಮೀಕ್ಷಕರು, ಮೇಲ್ವಿಚಾರಕರಿಗೆ ಗೌರವಧನ ಜಮೆಯಾಗಿಲ್ಲ. ಎಸ್‌ಸಿ ಒಳಮೀಸಲಾತಿ ಸಮೀಕ್ಷೆಯ ಬಾಕಿ ಸಂಭಾವನೆ ಜತೆಗೆ ಚಾಲ್ತಿ ಸಮೀಕ್ಷೆಯ ಒಟ್ಟಾರೆ ಗೌರವಧನವನ್ನು ದೀಪಾವಳಿಗೆ ಮುನ್ನ ಸರ್ಕಾರ ಪಾವತಿಸಲಿ. - ಚಂದ್ರಶೇಖರ ನುಗ್ಗಲಿ, ಅಧ್ಯಕ್ಷ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.