ಗ್ರಾಮ ಒನ್ ಐಡಿ ಅನ್‌ಲಾಕ್ ಮಾಡಿ

grama one
ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮ ಒನ್ ಸೇವಾ ಕೇಂದ್ರದ ಬೀಗ ತೆರೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಎಸ್.ಪ್ರಕಾಶ್, ಸುಚಿತಾ ಹೆಗ್ಡೆ, ನಾಗರಾಜ್, ಸತೀಶ್ ಕೇಶವತ್ತಿ, ರವಿ, ಬಿದ್ದಪ್ಪ ಇತರರಿದ್ದರು.
Published on

ಬಾಳೆಹೊನ್ನೂರು: ಸಮೀಪದ ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಗ್ರಾಮಒನ್ ಕೇಂದ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನೋಂದಣಿಗೆ ಹಣ ಪಡೆಯಲಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರ ದೂರಿನ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಅಧಿಕಾರಿಗಳು ಬೀಗ ಹಾಕಿ, ಐಡಿ ಲಾಕ್ ಮಾಡಿದ್ದಾರೆ. ಆದರೆ ಇದು ದುರುದ್ದೇಶಪೂರಿತ ದೂರು. ಹಾಗಾಗಿ ಕೂಡಲೇ ಸೇವಾ ಕೇಂದ್ರವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕರ್ಕೇಶ್ವರ ಗ್ರಾಮದಲ್ಲಿ ಒಂದೂವರೆ ವರ್ಷದಿಂದ ಗ್ರಾಮ ಒನ್ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈವರೆಗೂ ಗ್ರಾಮಸ್ಥರಿಗೆ ಯಾವ ತೊಂದರೆಗಳೂ ಆಗಿಲ್ಲ. ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳಿಗೆ ಸರ್ಕಾರದಿಂದ ನಿಗದಿಪಡಿಸಿದ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಶುಲ್ಕವನ್ನು ಎಂದಿಗೂ ಪಡೆದಿಲ್ಲ. ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಆರಂಭವಾದ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳಿಗೂ ಸಹ ಕೇಂದ್ರದಿಂದ ಶುಲ್ಕ ಪಡೆದಿಲ್ಲ. ಆದರೆ ಕೆಲವು ವ್ಯಕ್ತಿಗಳು ಕೇಂದ್ರದ ಮೇಲೆ ದುರುದ್ದೇಶದಿಂದ ಗ್ಯಾರಂಟಿ ಯೋಜನೆಗಳ ನೋಂದಣಿಗೆ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೇವಾ ಕೇಂದ್ರದ ಐಡಿಯನ್ನು ಲಾಕ್ ಮಾಡಿದ್ದಾರೆ. ಇದು ದ್ವೇಷ ಸಾಧನೆಗಾಗಿ ಮಾಡಿದ ಕೃತ್ಯ. ಅಧಿಕಾರಿಗಳು ಪೂರ್ವಾಪರ ಪರಿಶೀಲನೆ ನಡೆಸದೆ ಐಡಿ ಲಾಕ್ ಮಾಡಿರುವುದು ಖಂಡನೀಯ. ದುರುದ್ದೇಶದಿಂದ ದೂರು ನೀಡಿದ ವ್ಯಕ್ತಿ ವಿರುದ್ಧ ಅಧಿಕಾರಿಗಳು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ನಾಡಕಚೇರಿ ಉಪ ತಹಸೀಲ್ದಾರ್ ನಾಗೇಂದ್ರ, ಆರ್‌ಐ ಮಂಜು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಥವಾ ತಹಸೀಲ್ದಾರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಕೂಡಲೇ ಗ್ರಾಮ ಒನ್ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.
ಮೂರು ದಿನಗಳಿಂದ ಗ್ರಾಮ ಒನ್ ಸೇವೆ ಸ್ಥಗಿತಗೊಂಡಿದೆ. ಹಲವು ಕೂಲಿ ಕಾರ್ಮಿಕರು ದೈನಂದಿನ ಕೆಲಸ ಬಿಟ್ಟು ಸೇವಾ ಕೇಂದ್ರಕ್ಕೆ ಬಂದು ವಾಪಸ್ ತೆರಳುವಂತಾಗಿದೆ. ಕೃಷಿಕರು ಅಡಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಸಲು ಜು.31ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ವಿಳಂಬವಾದರೆ ಪರಿಹಾರ ಧನ ಲಭಿಸುವುದಿಲ್ಲ. ಕರ್ಕೇಶ್ವರ ಗ್ರಾಪಂನಲ್ಲಿ ಬಾಪೂಜಿ ಸೇವಾ ಕೇಂದ್ರವಿದೆ. ಅಲ್ಲಿ ವಿದ್ಯುತ್, ಇನ್ವರ್ಟರ್ ಹಾಗೂ ಸರ್ವರ್ ಸಮಸ್ಯೆಯಿದ್ದು, ಅಲ್ಲಿಯೂ ಸರ್ಕಾರದ ಸೇವೆಗಳು ಲಭಿಸುತ್ತಿಲ್ಲ ಎಂದು ದೂರಿದರು.
ಗ್ರಾಮಸ್ಥರು ಶಾಸಕ ರಾಜೇಗೌಡ ಅವರೊಂದಿಗೆ ದೂರವಾಣಿಯಲ್ಲಿ ಸಮಸ್ಯೆ ಕುರಿತು ಚರ್ಚಿಸಿ ಬಗೆಹರಿಸಲು ಒತ್ತಾಯಿಸಿದರು. ಸಂಜೆಯಾದರೂ ಪ್ರತಿಭಟನೆ ಕೈಬಿಡಲಿಲ್ಲ. ಗ್ರಾಮಸ್ಥರಾದ ಎಸ್.ಪ್ರಕಾಶ್, ಸುಚಿತಾ ಹೆಗ್ಡೆ, ನಾಗರಾಜ್, ಸತೀಶ್ ಕೇಶವತ್ತಿ, ರವಿ, ಬಿದ್ದಪ್ಪ, ಕೆ.ಸಿ.ಜಯಪಾಲ್, ಜಯಂತಿ, ವನಜಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net