ಬಂಪರ್​​​ ಆಫರ್: ಒಂದು ಸಲ ಇಷ್ಟು ಹಣ ಕೊಟ್ರೆ ಸಾಕು ಲೈಫ್​ಟೈಮ್​ ಫ್ರೀ ಪಾನಿಪುರಿ, ಎಷ್ಟು ಬೇಕಾದ್ರೂ ತಿನ್ನಿ! Panipuri

Panipuri
Published on

Panipuri : ಪಾನಿಪುರಿ ಭಾರತದ ಅತ್ಯಂತ ಜನಪ್ರಿಯ ಬೀದಿ ಆಹಾರ. ಅನೇಕ ಮಂದಿ ಪಾನಿಪುರಿಯನ್ನು ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಹುಡುಗಿಯರಿಗೆ ಪಾನಿಪುರಿ ಅಥವಾ ಗೋಲ್​ಗಪ್ಪಾ ಅಂದ್ರೆ ಪಂಚ ಪ್ರಾಣ. ಏಕೆಂದರೆ, ಇದು ತುಂಬಾ ರುಚಿಕರವಾಗಿರುತ್ತದೆ. ಹೀಗಾಗಿ ಪಾನಿಪುರಿಯನ್ನು ತುಂಬಾ ಇಷ್ಟಪಡುವವರಿಗೆ ಅಂಗಡಿ ಮಾಲೀಕರೊಬ್ಬರು ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ ಪಾನಿಪುರಿ ಮಾರಾಟಗಾರರೊಬ್ಬರು ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ನೀವು ಒಂದೇ ಸಲ 99,000 ರೂಪಾಯಿ ಪಾವತಿಸಿದರೆ ಸಾಕು ಜೀವನಪರ್ಯಂತ ಉಚಿತವಾಗಿ ಪಾನಿಪುರಿ ಸಿಗುತ್ತದೆ. ಈ ಒಪ್ಪಂದದ ಪ್ರಕಾರ, ಹಣ ಪಾವತಿಸುವ ಗ್ರಾಹಕರು ಯಾವಾಗ ಬೇಕಾದರೂ ಸ್ಟಾಲ್‌ಗೆ ಬಂದು ಉಚಿತವಾಗಿ ತಿನ್ನಬಹುದು. ಅಲ್ಲದೆ, ತಿನ್ನುವ ಪಾನಿಪುರಿಗೂ ಯಾವುದೇ ಮಿತಿಯಿಲ್ಲ. ಈ ಬಂಪರ್​ ಕೊಡುಗೆ ಈಗಾಗಲೇ ವೈರಲ್ ಆಗಿದ್ದು, ಇಬ್ಬರು ಗ್ರಾಹಕರು ಈಗಾಗಲೇ ನಗದು ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಆಫರ್​ಗೆ ಸಂಬಂಧಿಸಿದ ಜಾಹೀರಾತಿನ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ.

ಈ ಆಫರ್ ಬಗ್ಗೆ ಮಾಹಿತಿಯನ್ನು @marketing.growmatics ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಇದು ಪ್ರಸ್ತುತ ವೈರಲ್ ಆಗುತ್ತಿದೆ. ಈ ಪೋಸ್ಟ್‌ಗೆ ಇದುವರೆಗೆ 47 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸಾವಿರಾರು ಜನರು ಇದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ಕಂಡುಕೊಂಡಿದ್ದರೆ, ಇತರರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಆಫರ್ ಶಾಶ್ವತವಾಗಿ ಉಳಿಯುತ್ತದೆಯೇ? ಅಂಗಡಿ ಮುಚ್ಚಿದರೆ ಏನು? ಎಂದು ಪ್ರಶ್ನಿಸುತ್ತಿದ್ದಾರೆ. ಇಲ್ಲಿ ಅಂಗಡಿಯವನ ನಿಜವಾದ ಉದ್ದೇಶ ಜಾಹೀರಾತು ನೀಡಿ ವೈರಲ್ ಆಗುವುದು ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.

ಈ ಬಂಪರ್​ ಆಫರ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net