ಪ್ರೇಮ ಪ್ರಕರಣ; ನೋಡ ನೋಡುತ್ತಿರುವಂತೆ ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

crime
Published on

ಆಂಧ್ರಪ್ರದೇಶ: ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪಟ್ಟಣದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಅಲ್ತಾಫ್ (19) ಎಂಬ ಯುವಕನ ಮೇಲೆ ಮೂವರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸೋಮವಾರ ಅಲ್ತಾಫ್ ಮನೆಯಿಂದ ಹೊರಗೆ ಬರುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ ಮೂವರು ಯುವಕರು ಅಡ್ಡಗಟ್ಟಿದ್ದಾರೆ. ಆ ನಂತರ ಬಲವಂತವಾಗಿ ಬೈಕ್ ನಲ್ಲಿ ಎಳೆದೊಯ್ದು ಪಟ್ಟಣ ಸಮೀಪವಿರುವ ನವೋದಯ ಶಾಲೆ ಬಳಿ ಕರೆದೊಯ್ದಿದ್ದಾರೆ. ಎಲ್ಲರೂ ನೋಡ ನೋಡುತ್ತಿರುವಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಸ್ಥಳೀಯರು ಯುವಕರನ್ನು ಹಿಡಿಯಲು ಯತ್ನಿಸಿದಾಗ ಓಡಿ ಹೋಗಿದ್ದಾರೆ. ಬೆಂಕಿಯನ್ನು ನಿಯಂತ್ರಿಸಿದ ಬಳಿಕ ಗಂಭೀರವಾಗಿ ಗಾಯಗೊಂಡಿರುವ ಅಲ್ತಾಫ್​​​​ನನ್ನು 108 ಸಿಬ್ಬಂದಿ ಮದನಪಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸಂತ್ರಸ್ತ ಯುವಕನ ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲ್ತಾಫ್ ಅವರನ್ನು ಡಿಎಸ್ಪಿ ಭೇಟಿ ಮಾಡಿದ್ದು, ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಪ್ರೇಮ ಪ್ರಕರಣವೇ ಘಟನೆಗೆ ಕಾರಣ ಎನ್ನಲಾಗಿದೆ. ಸಂಪೂರ್ಣ ವಿವರ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net