172 ಬಾರಿ ಹಾವು ಕಡಿದರೂ ಬದುಕುಳಿದ... 21 ಜನರ ಪ್ರಾಣವನ್ನೂ ಉಳಿಸಿದ! ಯಾರು ಗೊತ್ತಾ ಈ ಪವಾಡ ಪುರುಷ? Unknown Facts

Unknown Facts
Published on

Unknown Facts : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.

ಹಾವು ಕಂಡರೆ ಮಾರುದ್ದ ಓಡುವವರ ನಡುವೆ ಹಾವಿನ ರಕ್ಷಣೆಗೆ ನಿಂತಿರುವ ಉರಗ ಪ್ರೇಮಿಗಳು ನಿಜಕ್ಕೂ ಗ್ರೇಟ್​. ಎಷ್ಟೋ ಬಾರಿ ಹಾವಿನ ಕಡಿತಕ್ಕೆ ಒಳಗಾದರೂ ಕೂಡ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಅದೇ ಸೇವೆಯಲ್ಲಿ ತೊಡಿಗಿಸಿಕೊಳ್ಳುತ್ತಾರೆ. ನಾವು ಹೇಳಲು ಹೊರಟಿರುವ ಉರಗ ಪ್ರೇಮಿಗೆ ಒಂದಲ್ಲ ಎರಡಲ್ಲ 172 ಬಾರಿ ಹಾವು ಕಚ್ಚಿವೆ. ನಂಬಲು ಅಸಾಧ್ಯ ಎನಿಸಿದರೂ ಇದೇ ಸತ್ಯ.

ಆ ಉರಗ ಪ್ರೇಮಿ ಯಾರೆಂದರೆ, ಬಿಲ್ ಹ್ಯಾಸ್ಟ್. ಇವರು ಅಮೆರಿಕದ ಸಂಶೋಧಕ. 60 ವರ್ಷಗಳಲ್ಲಿ ಮೂರು ಮಿಲಿಯನ್ ವಿಷಪೂರಿತ ಹಾವುಗಳನ್ನು ನಿರ್ವಹಿಸಿದ್ದಾರೆ. ಹೀಗಾಗಿಯೇ ಅವರಿಗೆ 'ಸ್ನೇಕ್ ಮ್ಯಾನ್' ಎಂಬ ಅಡ್ಡಹೆಸರನ್ನು ಸಹ ಇಡಲಾಗಿದೆ.

ಬಿಲ್​ ಪ್ರತಿದಿನ 32 ವಿವಿಧ ಜಾತಿಯ ಹಾವುಗಳ ವಿಷವನ್ನು ಚುಚ್ಚುಮದ್ದು ಮಾಡಿಕೊಳ್ಳುತ್ತಿದ್ದರು. ಹೀಗಾಗಿ, ಬಿಲ್‌ನ ರಕ್ತದಲ್ಲಿ ಹಾವಿನ ವಿಷದಿಂದ ರಕ್ಷಿಸುವ ಪ್ರತಿಕಾಯಗಳಿದ್ದವು. ಬಿಲ್ ತನ್ನ ರಕ್ತದಿಂದಲೇ ಪ್ರಪಂಚದ ವಿವಿಧ ಭಾಗಗಳಿಂದ 21 ಜನರನ್ನು ಹಾವು ಕಡಿತದಿಂದ ರಕ್ಷಿಸುವಲ್ಲಿ ಯಶಸ್ವಿ ಸಹ ಆಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಹಾವುಗಳ ಸ್ನೇಹಿತನಾಗಿದ್ದ ಬಿಲ್, ಏಳನೇ ವಯಸ್ಸಿನಲ್ಲಿ ಹಾವನ್ನು ಹಿಡಿದು ಮನೆಗೆ ಬಂದನು. ಇದರಿಂದಾಗಿ, ಬಿಲ್‌ನ ತಾಯಿ ಮೂರು ದಿನಗಳ ಕಾಲ ಆತನನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದರು. ಆದರೂ, ಬಿಲ್ ಹಿಂದೆ ಸರಿಯಲಿಲ್ಲ.

ಹಾವಿನೊಂದಿಗಿನ ಅತಿಯಾದ ಸ್ನೇಹದಿಂದಾಗಿ ಬಿಲ್‌ನ ಮೊದಲ ಹೆಂಡತಿ ಆತನನ್ನು ತೊರೆದಳು. ಸುಮಾರು 172 ಬಾರಿ ಹಾವು ಕಡಿತಕ್ಕೆ ಒಳಗಾದರೂ ಕೂಡ ಪವಾಡ ಎಂಬಂತೆ ಬದುಕುಳಿದ ಬಿಲ್, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದರು. ಬಿಲ್ 2011ರಲ್ಲಿ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net