ಕರೊನಾಗೆ ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದರಾಬಾದ್​ ವಿವಿ ಬಯೋಕೆಮಿಸ್ಟ್ರಿ ವಿಭಾಗ!

Heydarabad VV
Published on

ಹೈದರಾಬಾದ್​: ಹೈದರಾಬಾದ್​ ಯೂನಿವರ್ಸಿಟಿಯ ಬಯೋಕೆಮಿಸ್ಟ್ರಿ ವಿಭಾಗದ ಸಂಶೋಧಕರು ಮತ್ತು ವಿಜ್ಞಾನಿಗಳು ಕರೊನಾ ಕುರಿತಾದ ಅಧ್ಯಯನದಲ್ಲಿ ಲಸಿಕೆ ಕಂಡುಹಿಡಿಯುವತ್ತ ದಾಪುಗಾಲು ಇಟ್ಟಿದ್ದು, ಟಿ-ಸೆಲ್​ ಎಪಿಟೊಪ್ಸ್​ ಹೆಸರಿನ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಯಾಗಿದೆ.

ಟಿ-ಸೆಲ್ ಎಪಿಟೋಪ್ಸ್ ಲಸಿಕೆಯು ಮಹಾಮಾರಿ ಕರೊನಾ ವೈರಸ್​​ನ ಎಲ್ಲ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಪ್ರೋಟೀನ್‌ಗಳ ವಿರುದ್ಧ ಕೆಲಸ ಮಾಡುವ ಗುರಿಯನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಲಸಿಕೆಯಲ್ಲಿ ಕರೊನಾವೈರಲ್​ ಪೆಪ್ಟೈಡ್​ ಅಣುಗಳಿದ್ದು, ಅವುಗಳನ್ನು ಕೋಶಗಳಿಂದ ಬಳಸಿಕೊಂಡು ಪ್ರತಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಪೆಪ್ಟೈಡ್​ಗಳಲ್ಲಿ ಆಶ್ರಯಿಸಿರುವ ವೈರಸ್​ ಕೋಶಗಳನ್ನು ನಾಶಮಾಡಬಹುದಾಗಿದೆ.

ಕಂಪ್ಯೂಟೇಶನಲ್ ಸಾಫ್ಟ್‌ವೇರ್‌ನೊಂದಿಗೆ ಪ್ರಬಲ ಇಮ್ಯುನೊಇನ್‌ಫರ್ಮ್ಯಾಟಿಕ್ಸ್ ವಿಧಾನಗಳನ್ನು ಬಳಸಿಕೊಂಡು, ಬಯೋಕೆಮಿಸ್ಟ್ರಿ ವಿಭಾಗದ ಅಧ್ಯಾಪಕಿ ಡಾ. ಸೀಮಾ ಮಿಶ್ರಾ ಅವರು ಸಂಭಾವ್ಯ ಎಪಿಟೋಪ್‌ಗಳನ್ನು ರಚಿಸಿದ್ದಾರೆ. ಇದು ಮಾನವ ಜೀವಕೋಶಗಳಿಗೆ ಯಾವುದೇ ಅಡ್ಡಪರಿಣಾಮವನ್ನು ಉಂಟುಮಾಡದ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ಇಡೀ ಜನಸಂಖ್ಯೆಗೆ ಲಸಿಕೆ ನೀಡಲು ಬಳಸಬಹುದಾಗಿದೆ.

ಸಾಮಾನ್ಯವಾಗಿ ಲಸಿಕೆ ಕಂಡುಹಿಡಿಯಲು 15 ವರ್ಷಗಳಾಗುತ್ತವೆ. ಆದರೆ, ಪ್ರಬಲ ಕಂಪ್ಯೂಟೇಶನಲ್ ಸಾಧನವು 10 ದಿನಗಳಲ್ಲಿ ಲಸಿಕೆ ಕಂಡುಹಿಡಿಯಲು ಸಹಾಯ ಮಾಡುತ್ತದೆ. ಸಂಶೋಧನೆಯನ್ನು ವೈಜ್ಞಾನಿಕ ಸಮುದಾಯದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಹೈದರಾಬಾದ್​ ವಿಶ್ವವಿದ್ಯಾಲಯವು ಶುಕ್ರವಾರ (ಮಾರ್ಚ್ 27) ತಿಳಿಸಿದೆ.

ಹೀಗಿದ್ದರೂ ಕರೊನಾ ಸೋಂಕು ಮತ್ತಷ್ಟು ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಒಳ್ಳೆಯ ದಾರಿ. ಟಿ-ಸೆಲ್ಸ್​ ಎಪಿಟೋಪ್ಸ್​ ಲಸಿಕೆಯ ಪರಿಣಾಮಕಾರಿಯನ್ನು ತಿಳಿದುಕೊಳ್ಳಲು ಮತ್ತಷ್ಟು ಪರೀಕ್ಷಿಸಬೇಕಿದೆ ಎಂದು ಹೈದರಾಬಾದ್​ ವಿವಿಯು ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net