

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಮೊದಲಿನಿಂದಲೂ ಶೈಕ್ಷಣಿಕ ಗುಣಮಟ್ಟದಲ್ಲಿ ಮುಂದಿದ್ದು, ಕಳೆದ ಐದು ವರ್ಷಗಳಲ್ಲಿ ಸಂಶೋಧನೆ ಮತ್ತು ಬೋಧನಾ ಕಾರ್ಯದಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಂಡ ಪರಿಣಾಮ ರಾಷ್ಟ್ರಮಟ್ಟದ ಹಲವು ರ‌್ಯಾಂಕಿಂಗ್‌ಗಳಲ್ಲಿ ಉತ್ತಮ ಸಾಧನೆ ತೋರಿತು ಎಂದು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಸಂತಸ ವ್ಯಕ್ತಪಡಿಸಿದರು.
ಕುವೆಂಪು ವಿವಿಯ ಪ್ರೊ. ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಮಂಗಳವಾರ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಉತ್ತಮ ಸಂಶೋಧನೆ ಕೈಗೊಳ್ಳಬಲ್ಲ ಆಸಕ್ತಿ, ಸಾಮರ್ಥ್ಯವಿರುವ ಅಧ್ಯಾಪಕ ವೃಂದವಿದೆ. ಕೆಎಸ್‌ಯುಆರ್‌ಎಫ್, ಎನ್‌ಐಆರ್‌ಎಫ್ ರ‌್ಯಾಂಕಿಂಗ್‌ಗಳಲ್ಲಿ ಉತ್ತಮ ಅಂಕಗಳೊಂದಿಗೆ ವಿವಿಧ ಸೂಚ್ಯಂಕಗಳಲ್ಲಿ ಸದಾ ಅಗ್ರಸ್ಥಾನ ಪಡೆಯುತ್ತ ಬಂದಿದೆ. ನ್ಯಾಕ್ ಮೌಲ್ಯಮಾಪನದಲ್ಲಿ ಎ ಗ್ರೇಡ್ ಪಡೆದದ್ದು ಇದಕ್ಕೆ ಮುಕುಟಪ್ರಾಯ ಎಂದರು.
ಕಳೆದ ಐದಾರು ವರ್ಷಗಳಲ್ಲಿ ವಿವಿಧ ವಿಭಾಗಗಳಿಂದ ಹಿರಿಯ ಪ್ರಾಧ್ಯಾಪಕರು ವಯೋನಿವೃತ್ತಿ ಹೊಂದಿದ್ದು, ಸರ್ಕಾರವು ಅವರ ಸ್ಥಾನಗಳನ್ನು ತುಂಬಿಕೊಳ್ಳಲು ಅವಕಾಶ ನೀಡಿದಲ್ಲಿ ವಿವಿಯ ಶೈಕ್ಷಣಿಕ ಸಂಶೋಧನಾ ಪರಂಪರೆ, ಸ್ಥಾನಗಳನ್ನು ಮುಂದುವರಿಸಲು ಬಲ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ಸಂಶೋಧನೆಗಳನ್ನು ನಡೆಸುತ್ತಿರುವ ಬೋಧಕರು ಸಂಶೋಧನೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ, ಪೇಟೆಂಟ್‌ಗಳನ್ನು ಪಡೆದಿದ್ದಾರೆ. ಸಂಶೋಧನಾ ಪ್ರಕಟಣೆ, ಸಾಮಾಜಿಕ ಚಟುವಟಿಕೆ ಮೂಲಕ ಜನರು, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅರ್ಹರಾದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿಗೆ ಪದೋನ್ನತಿ ಒದಗಿಸಿರುವುದು ತೃಪ್ತಿ ನೀಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ನೀಡಲು ಸಲಹೆ ನೀಡಿದ, ಸಹಕರಿಸಿದ ವಿವಿಯ ಆಡಳಿತಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಶಿವಮೊಗ್ಗ-ಭದ್ರಾವತಿ ನಗರಗಳ ಮಾಜಿ-ಹಾಲಿ ಜನಪ್ರತಿನಿಧಿಗಳು, ಸಿಂಡಿಕೇಟ್ ಸದಸ್ಯರು ಸೇರಿ ಹಲವರಿಗೆ ಅವರು ಧನ್ಯವಾದ ತಿಳಿಸಿದರು.
ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ.ನವೀನ್‌ಕುಮಾರ್, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಎಚ್.ಎನ್.ರಮೇಶಬಾಬು, ಬೋಧಕೇತರ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಮಾತನಾಡಿದರು. ಮಾನವ ಸಂಪನ್ಮೂಲ ವಿಭಾಗದ ಉಪಕುಲಸಚಿವ ಡಾ. ಎಂ.ಸುರೇಶ್, ಉಪನ್ಯಾಸಕಿ ಡಾ. ಹಸೀನಾ ಉಪಸ್ಥಿತರಿದ್ದರು.
ಪ್ರೊ. ಬಿ.ಪಿ.ವೀರಭದ್ರಪ್ಪ ಸೇವಾ ನಿವೃತ್ತಿ
ಕುವೆಂಪು ವಿವಿಯಲ್ಲಿ ನಾಲ್ಕು ವರ್ಷ ಕುಲಪತಿಯಾಗಿ ಸೇವೆ ಸಲ್ಲಿಸಿದ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ಮಂಗಳವಾರ (ಆ.1)ರಂದು ಸೇವಾ ನಿವೃತ್ತರಾದರು. 2019 ಜು.31ರಂದು ಕುವೆಂಪು ವಿವಿ ಕುಲಪತಿಯನ್ನಾಗಿ ನಿಯುಕ್ತಿಗೊಳಿಸಿ ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಆದೇಶಿಸಿದ್ದರು. ಅದಕ್ಕೂ ಮುನ್ನ ದಾವಣಗೆರೆ ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಮಂಗಳವಾರ ಪತ್ನಿ ಮತ್ತು ಪುತ್ರಿಯೊಂದಿಗೆ ಕುವೆಂಪು ವಿವಿಗೆ ಆಗಮಿಸಿ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿದರು.