ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ದಸಂಸ ಪ್ರತಿಭಟನೆ

24 smg 1
Published on

ಶಿವಮೊಗ್ಗ: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಒಳಪಡುವ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದ ಹಲವು ವಿವಿಗಳಲ್ಲಿ ಯುಜಿ, ಪಿಜಿ ಹಾಗೂ ಇತರೆ ಪದವೀಧರ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಲಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಆದೇಶಗಳಿಂದ ಬಡ ದಲಿತ ವಿದ್ಯಾರ್ಥಿಗಳಿಗೆ ವಿದ್ಯೆಯಿಂದ ವಂಚಿತರಾಗುವಂತಾಗಿದೆ ಎಂದು ದೂರಿದರು.

ವಾರ್ಷಿಕ ಆದಾಯದ ಮಿತಿಗೊಳಪಡುವ ವಿದ್ಯಾರ್ಥಿಗಳ ಅಂಕಪಟ್ಟಿ ಶುಲ್ಕ 200 ರೂ. ಮಾತ್ರ ಪಾವತಿಸಬೇಕಿದೆ. ಸರ್ಕಾರಿ ಆದೇಶದಂತೆ ಇದುವರೆಗೆ ಅಂಕಪಟ್ಟಿ ಶುಲ್ಕ ಮಾತ್ರ ಭರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಶುಲ್ಕ ವಿನಾಯಿತಿ ಪಡೆದಿರುವ ಎಸ್ಸಿ, ಎಸ್ಟಿ, ಓಬಿಸಿ ವಿದ್ಯಾರ್ಥಿಗಳ ವ್ಯತ್ಯಾಸ ಪರೀಕ್ಷಾ ಶುಲ್ಕವನ್ನು ಸರ್ಕಾರದಿಂದ ಮಂಜೂರಾತಿ ಪಡೆದ ನಂತರ ಆಯಾ ಮಹಾವಿದ್ಯಾಲಯಗಳ ಪ್ರಾಚಾರ್ಯರು ವಿವಿಗೆ ಸಲ್ಲಿಸುತ್ತಿದ್ದರು. ಆದರೆ, ಇತ್ತೀಚಿನ ಸರ್ಕಾರಿ ಆದೇಶದನ್ವಯ ಎಲ್ಲ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಣ ನೀತಿ ನಿಯಮದಡಿ ಸ್ನಾತಕಪದವಿಗಳ ಪ್ರಥಮ ಸೆಮಿಸ್ಟಾರ್‌ಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಸಂಪೂರ್ಣ ದತ್ತಾಂಶವನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಸಿಯುಯುಸಿಎಂಎಸ್ ತಂತ್ರಾಂಶದ ಮೂಲಕ ನಿರ್ವಹಿಸತಕ್ಕದ್ದು ಎಂದಿದೆ. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ವಿವಿಗಳು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪೂರ್ಣ ಶುಲ್ಕ 1,800 ರೂ. ಭರಿಸಬೇಕು. ನಂತರ ನಿಮ್ಮ ಖಾತೆಗೆ ವಾಪಾಸ್ ಜಮಾ ಆಗುತ್ತದೆ ಎಂದು ಹೇಳಿ ಹಣ ವಸೂಲಿ ಮಾಡುತ್ತಿವೆ ಎಂದು ದೂರಿದರು.

ವಿದ್ಯಾರ್ಥಿಗಳ ಖಾತೆಗೆ ವಾಪಾಸ್ ಬಂದ ಒಂದೇ ಒಂದು ಉದಾಹರಣೆ ಇಲ್ಲ. ಆದ್ದರಿಂದ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಈ ನೀತಿ ವಿರೋಧಿಸಿ ಪರೀಕ್ಷಾ ಶುಲ್ಕ ವಿನಾಯಿತಿಗೆ ಒತ್ತಾಯಿಸಿ ಕಳೆದೊಂದು ತಿಂಗಳಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರೂ ಕುವೆಂಪು ವಿವಿ ಯಾವುದೇ ಕ್ರಮ ಕೈಗೊಂಡಿಲ್ಲ. ಆ. 18ರಂದು ಧರಣಿ ನಡೆಸಿದ್ದರಿಂದ ಪರೀಕ್ಷಾ ಶುಲ್ಕ ಸಂಬಂಧ ಗೊಂದಲದ ಹಿನ್ನೆಲೆಯಲ್ಲಿ ಕುವೆಂಪು ವಿವಿ ವ್ಯಾಪ್ತಿಯ ಬಿಇಡ್ ವಿದ್ಯಾರ್ಥಿಗಳ ಪರೀಕ್ಷೆ ಮುಂದೂಡಿದೆ. ಆದ್ದರಿಂದ ಕೂಡಲೇ ದಲಿತ ವಿದ್ಯಾರ್ಥಿಗಳಿಗೆ ಹೊರೆಯಾಗಿರುವ ಸುತ್ತೋಲೆ ರದ್ದುಗೊಳಿಸಿ ಈ ಹಿಂದಿನಂತೆ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಶುಲ್ಕ ಮಾತ್ರ ಭರಿಸಿಕೊಂಡು ಪರೀಕ್ಷೆ ಬರೆಯಲು ಹೊಸ ಸುತ್ತೋಲೆಯನ್ನು ಎಲ್ಲ ವಿವಿಗಳಿಗೆ ತಕ್ಷಣ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಡಿಎಸ್‌ಎಸ್‌ನ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್.ಹಾಲೇಶಪ್ಪ, ಪ್ರಮುಖರಾದ ಕಾಶಿಪುರ ಗೋವಿಂದ, ಹುಣಸೋಡು ಶೇಷಪ್ಪ, ಎಂ.ಆರ್.ಶಿವಕುಮಾರ್, ಎಂ.ಮಂಜುನಾಥ್, ರಂಗಸ್ವಾಮಿ, ವಿದ್ಯಾರ್ಥಿ ಒಕ್ಕೂಟದ ಸಂಗೀತಾ, ರಮೇಶ್, ಗೋವಿಂದರಾಜ್, ಸೂಗೂರು ಪರಮೇಶ್ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net