

‘ಶ್ರೀರಾಮ! ಈ ಬ್ರಹ್ಮಾಂಡಗಳಲ್ಲಿ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ವೈಚಿತ್ರ್ಯವಿದೆ. ಕೆಲವು ಬ್ರಹ್ಮಾಂಡಗಳಲ್ಲಿ ಸತ್ವಗುಣ ಪ್ರಧಾನ, ಮತ್ತೆ ಕೆಲವು ಬ್ರಹ್ಮಾಂಡಗಳಲ್ಲಿ ರಜೋಗುಣ ಪ್ರಧಾನ, ಮತ್ತೆ ಕೆಲವು ತಮಃಪ್ರಧಾನವಾದವು. ಹೀಗಾಗಲು ಬ್ರಹ್ಮ-ವಿಷ್ಣು-ರುದ್ರರು ಕಾರಣ. ಕೆಲವು ಬ್ರಹ್ಮಾಂಡಗಳಿಗೆ ಚತುಮುಖ ಬ್ರಹ್ಮನೇ ಆದಿಪುರುಷ. ಅಂದರೆ ಚತುಮುಖ ಬ್ರಹ್ಮನಿಂದಲೇ ಅವುಗಳು ರಕ್ಷಿಸಲ್ಪಡುತ್ತಿವೆ. ಮತ್ತೆ ಕೆಲವು ಬ್ರಹ್ಮಾಂಡಗಳು ವಿಷ್ಣುವಿನಿಂದ ರಕ್ಷಿಸಲ್ಪಡುತ್ತವೆ. ಇನ್ನು ಕೆಲವು ರುದ್ರ, ಭೈರವ, ದುರ್ಗೆ, ವಿನಾಯಕ ಮುಂತಾದ ದೇವರುಗಳಿಂದ ರಕ್ಷಿಸಲ್ಪಡುತ್ತಿವೆ. ಯಾವ ದೇವರಿಂದ ಬ್ರಹ್ಮಾಂಡವು ರಕ್ಷಿಸಲ್ಪಡುತ್ತದೆಯೋ, ಅವನಿಂದಲೇ ಉಳಿದ ದೇವರುಗಳು ಉತ್ಪತ್ತಿ (ಆವಿರ್ಭಾವ) ಹೊಂದುತ್ತವೆ. (ತಪಸಾ ತೋಷಯಿತ್ವಾ ತು ಪಿತರಂ ಪರಮೇಶ್ವರಮ್ | ಪರಸ್ಪರಸ್ಮಾಜ್ಜಾಯಂತೇ ಪರಸ್ಪರಜಯೈಷಿಣಃ || ಎಂಬ ಶಿವಪುರಾಣ ವಚನದಂತೆ ಉಳಿದ ದೇವರುಗಳು ಆವಿರ್ಭಾವ ಹೊಂದುತ್ತವೆ. ಉದಾಹರಣೆಗೆ ಬ್ರಹ್ಮನಿಂದ ರಕ್ಷಿಸಲ್ಪಟ್ಟ ಬ್ರಹ್ಮಾಂಡದಲ್ಲಿ ವಿಷ್ಣು, ರುದ್ರ ಮುಂತಾದವರು ಬ್ರಹ್ಮನಿಂದಲೇ ಆವಿರ್ಭಾವಗೊಳ್ಳುತ್ತಾರೆ. ಇದೇ ರೀತಿ ವಿಷ್ಣು, ರುದ್ರ, ಭೈರವ, ದುರ್ಗೆ, ವಿನಾಯಕ ಮುಂತಾದವರಿಂದ ರಕ್ಷಿಸಲ್ಪಟ್ಟ ಬ್ರಹ್ಮಾಂಡಗಳಲ್ಲಿ ಉಳಿದ ದೇವರುಗಳ ಆವಿರ್ಭಾವವನ್ನು ಚಿಂತನೆ ಮಾಡಿಕೊಳ್ಳಬೇಕು. ಈ ಒಂದೊಂದು ದೇವರುಗಳ ಮಾಹಾತ್ಮ್ಯವನ್ನು ಹೇಳುವ ಪುರಾಣಗಳಲ್ಲಿಯೂ, ಆ ದೇವರುಗಳೇ ಉಳಿದ ದೇವರುಗಳನ್ನು ನಿಯಂತ್ರಿಸುತ್ತಾರೆ ಎಂಬುದು ಬಂದಿರುವುದರಿಂದ ಹೀಗೆ ಚಿಂತನೆ ಮಾಡಬೇಕು.) ಮತ್ತೆ ಕೆಲವು ಬ್ರಹ್ಮಾಂಡಗಳು ವಿಷ್ಣುವಿನಿಂದ ರಕ್ಷಿಸಲ್ಪಟ್ಟಿವೆ. ವಿಷ್ಣುವೇ ಆ ಬ್ರಹ್ಮಾಂಡಗಳ ಸೃಷ್ಟಿಗೆ ಮೊದಲ ಒಡೆಯ. ಇನ್ನು ಕೆಲವು ಬ್ರಹ್ಮಾಂಡಗಳಿಗೆ ರುದ್ರ, ಭೈರವ, ದುರ್ಗೆ, ವಿನಾಯಕ ಮುಂತಾದವರು ಒಡೆಯರಾಗಿದ್ದಾರೆ. ಮತ್ತೆ ಕೆಲವು ಬ್ರಹ್ಮಾಂಡಗಳಿಗೆ ಈ ರೀತಿಯ ಒಡೆಯರಿಲ್ಲ. ಅಲ್ಲಿಯ ಮೃಗ-ಪಕ್ಷಿಗಳೇ ಮೊದಲಾದ ಜೀವಗಳು ‘ನಿರ್ನಾಥ’ ಜಂತುಗಳು.’
‘ಇನ್ನು ಕೆಲವು ಬ್ರಹ್ಮಾಂಡಗಳಲ್ಲಿ ಎಲ್ಲ ದೇವರನ್ನೂ ಗೌರವಿಸಲಾಗುತ್ತದೆ. ಬ್ರಹ್ಮ, ವಿಷ್ಣು, ರುದ್ರ ಮುಂತಾದ ಎಲ್ಲ ದೇವರುಗಳನ್ನೂ ಇಲ್ಲಿ ಸಮಪ್ರಧಾನವಾಗಿ ಕಾಣುತ್ತಾರೆ. (ಇದಕ್ಕೆ ಈಗ ನಾವೆಲ್ಲರೂ ಇರುವ ಈ ಬ್ರಹ್ಮಾಂಡವೇ ಉದಾಹರಣೆ.) ಹೀಗೆ ಬ್ರಹ್ಮಾಂಡಗಳು ಅನೇಕ ವಿಧದಿಂದ ವಿಚಿತ್ರವಾಗಿವೆ. ಜೀವಿಗಳ ಕರ್ಮವಾಸನೆಗಳು ಅನೇಕ ಪ್ರಕಾರವಾಗಿರುವುದರಿಂದ, ಅಂತಹ ಜೀವಿಗಳಲ್ಲಿಯೇ ಕೆಲವು ಜೀವಿಗಳು ಮುಂದೆ ಹಿರಣ್ಯಗರ್ಭರಾಗಿ, ಬ್ರಹ್ಮಾಂಡಶರೀರಿಗಳಾಗಿ ಹುಟ್ಟುವುದು ಈ ವೈಚಿತ್ರ್ಯಕ್ಕೆ ಒಂದು ಪ್ರಧಾನ ಕಾರಣ. ಇನ್ನೊಂದು ಪ್ರಧಾನ ಕಾರಣ ಆ ಬ್ರಹ್ಮಾಂಡಗಳ ಒಡೆಯರಾದ ದೇವರುಗಳ (ಬ್ರಹ್ಮ, ವಿಷ್ಣು, ರುದ್ರ ಮುಂತಾದವರ) ಇಚ್ಛಾಶಕ್ತಿ, ಜ್ಞಾನಶಕ್ತಿಗಳು ಬೇರೆ ಬೇರೆಯಾಗಿರುವುದು. ಬ್ರಹ್ಮಾಂಡಗಳಿಗೆ ಆಧಾರವಾಗಿರುವ ಚೈತನ್ಯಾಕಾಶವು ಒಂದೇ ಇದ್ದರೂ ಈ ಕಾರಣಗಳಿಂದ ವಿಚಿತ್ರವಾಗಿ, ಒಂದೊಂದು ತರಹ ಇವೆ. ಕೆಲವು ಬ್ರಹ್ಮಾಂಡಗಳಲ್ಲಿ ತಿರ್ಯಕ್ (ಭೂಮಿಗೆ ಅಡ್ಡಲಾಗಿ ಬೆನ್ನುಹುರಿ ಇರುವ) ಪ್ರಾಣಿಗಳೇ ತುಂಬಿಕೊಂಡಿವೆ. ಕೆಲವು ಬ್ರಹ್ಮಾಂಡಗಳಲ್ಲಿ ಸಮುದ್ರಗಳೇ ತುಂಬಿಕೊಂಡಿವೆ (ಸಮುದ್ರದಲ್ಲಿರುವ ಪ್ರಾಣಿಗಳೇ ಅಲ್ಲಿ ಹೆಚ್ಚು ಇವೆ). ಕೆಲವು ಬ್ರಹ್ಮಾಂಡಗಳಲ್ಲಿ ಪ್ರಾಣಿಸಮುದಾಯವಿಲ್ಲ.’
‘ಕೆಲವು ಬ್ರಹ್ಮಾಂಡಗಳಲ್ಲಿ ಶಿಲೆಗಳು ನಿಬಿಡವಾಗಿ ತುಂಬಿಕೊಂಡಿವೆ. ಕೆಲವು ಬ್ರಹ್ಮಾಂಡಗಳಲ್ಲಿ ಕ್ರಿಮಿ-ಕೀಟಗಳು ಹೆಚ್ಚು ತುಂಬಿಕೊಂಡಿವೆ. ಕೆಲವು ಬ್ರಹ್ಮಾಂಡಗಳಲ್ಲಿ ದೇವತೆಗಳು ಹೆಚ್ಚು ವಾಸವಾಗಿದ್ದಾರೆ. ಕೆಲವು ಬ್ರಹ್ಮಾಂಡಗಳಲ್ಲಿ ಮನುಷ್ಯರು ಹೆಚ್ಚು ತುಂಬಿಕೊಂಡಿದ್ದಾರೆ.’
‘ಕೆಲವು ಬ್ರಹ್ಮಾಂಡಗಳಲ್ಲಿ ನಿತ್ಯ ಅಂಧಕಾರವಿರುತ್ತದೆ. ಅಂಧಕಾರದಲ್ಲಿಯೇ ಜೀವಿಸುವ ಗೂಬೆಯೇ ಮೊದಲಾದ ಜೀವಿಗಳು ಅಲ್ಲಿ ಹೆಚ್ಚು ಇವೆ. ಇನ್ನು ಕೆಲವು ಬ್ರಹ್ಮಾಂಡಗಳು ಯಾವಾಗಲೂ ಬೆಳಕಿನಿಂದ ಕೂಡಿರುತ್ತವೆ. ಅಲ್ಲಿ ಬೆಳಕಿನ ಮೂಲಕ ವ್ಯವಹರಿಸುವ ಪ್ರಾಣಿಗಳೇ ತುಂಬಿಕೊಂಡಿವೆ. ಕೆಲವು ಬ್ರಹ್ಮಾಂಡಗಳಲ್ಲಿ ಸೊಳ್ಳೆಗಳು ತುಂಬಿಕೊಂಡಿವೆ. ಏಕೆಂದರೆ ಅಲ್ಲಿ ಔದುಂಬರ ವೃಕ್ಷದ ಹಣ್ಣುಗಳು ತುಂಬಾ ಇವೆ. ಕೆಲವು ಬ್ರಹ್ಮಾಂಡಗಳಲ್ಲಿ ಶೂನ್ಯವೇ ತುಂಬಿಕೊಂಡಿದೆ. ಅಂದರೆ ಸ್ಪಂದನೆಗಳು ಇಲ್ಲ. ಸ್ಪಂದನೆಗಳು ಇಲ್ಲದ, ನಿಶ್ಚೇಷ್ಟ ಸ್ವಭಾವದ ಜೀವಗಳೇ ಅಲ್ಲಿ ತುಂಬಿಕೊಂಡಿವೆ.’ (ಪರ್ವತಗಳು, ಕಲ್ಲು ಬಂಡೆ ಮುಂತಾದವುಗಳು ನಿಶ್ಚೇಷ್ಟ ಜೀವಗಳು.)