ಬಿಜೆಪಿ ಹದ್ದುಬಸ್ತಿನಲ್ಲಿಡಲು ಒಗ್ಗಟ್ಟಿನ ಕೆಲಸ ಅಗತ್ಯ; ಮುನಿಯಪ್ಪ

muniyappa
Published on

ಬೆಂಗಳೂರು: ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡಲು ಜಾತ್ಯತೀತ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ಹರಿಪ್ರಸಾದ್ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದಲ್ಲಿ ಜಾತ್ಯತೀತ ಒಕ್ಕೂಟವನ್ನು ಅಧಿಕಾರಕ್ಕೆ ತರಬೇಕು. ಈ ವಿಷಯವನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದೇನೆ. ಹರಿಪ್ರಸಾದ್ ಅಸಮಾಧಾನಗೊಂಡಿರುವ ಬಗ್ಗೆ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. ಅವರು ಹೈಕಮಾಂಡ್ ಮಟ್ಟದಲ್ಲಿ 25 ವರ್ಷಗಳ ಕಾಲ ಇದ್ದವರು. ಅವರಿಗೆ ಹೇಳುವಂತಹ ಪರಿಸ್ಥಿತಿಯಲ್ಲಿ ನಾವಿಲ್ಲ. ಅವರು ಪಕ್ಷದಲ್ಲಿ ಶಿಸ್ತಿನ ಸಿಪಾಯಿ ರೀತಿ ಕೆಲಸ ಮಾಡಿದವರು. ಅವರಿಗೆ ಪಕ್ಷ ಮುಖ್ಯ. ಅವರ ವೈಯಕ್ತಿಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಉಪಮುಖ್ಯಮಂತ್ರಿ ಹುದ್ದೆ ಕೊಡುವ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾನಮಾನ ಕೊಡುವುದು ಇದೆ. ದೇಶದ ಅಭಿವೃದ್ಧಿ ಜತೆಗೆ ಪಕ್ಷಕ್ಕೂ ಶಕ್ತಿ ಬರುತ್ತಿದೆ. ಸದ್ಯಕ್ಕೆ ನನಗೆ ಸಚಿವ ಸ್ಥಾನದಲ್ಲಿ ತೃಪ್ತಿ ಇತ್ತು. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ದಲಿತ ಸಿಎಂ ಪ್ರಶ್ನೆಗೆ ಮುನಿಯಪ್ಪ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net