ಹಿಂದು ಸಮುದಾಯದಲ್ಲಿ ಒಗ್ಗಟ್ಟು ಅಗತ್ಯ: ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಪ್ರತಿಪಾದನೆ

-67b22757f0669
Published on

ಬರ್ಧಮಾನ್ (ಪಶ್ಚಿಮ ಬಂಗಾಳ): ಹಿಂದು ಸಮುದಾಯದಲ್ಲಿ ಒಗ್ಗಟ್ಟು ಸಾಧಿಸುವುದು ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದ್ದಾರೆ. ಪಶ್ಚಿಮ ಬಂಗಾಳದ ಬರ್ಧಮಾನ್​ನ ಎಸ್​ಎಐ ಮೈದಾನದಲ್ಲಿ ಆರ್​ಎಸ್​ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಒಗ್ಗಟ್ಟನ್ನು ವೈವಿಧ್ಯತೆಯ ಜೀವಾಳ ಎಂದು ಭಾವಿಸಿರುವ ಹಿಂದುಗಳದ್ದು ಒಂದು ‘ಜವಾಬ್ದಾರಿಯುತ’ ಸಮುದಾಯವಾಗಿದೆ ಎಂದರು.

ಹಿಂದು ಸಮಾಜದ ಮೇಲೆ ಮಾತ್ರವೇ ಯಾಕೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ ಎಂದು ತಮ್ಮನ್ನು ಪದೇ ಪದೇ ಪ್ರಶ್ನಿಸಲಾಗುತ್ತಿದೆ. ಹಿಂದು ಸಮುದಾಯ ಮಾತ್ರವೇ ಒಂದು ಜವಾಬ್ದಾರಿಯುತ ಸಮುದಾಯವಾಗಿದೆ ಎಂಬುದು ಅದಕ್ಕೆ ತಮ್ಮ ಉತ್ತರವಾಗಿದೆ ಎಂದರು. ಜಗತ್ತಿನ ವೈವಿಧ್ಯತೆಯನ್ನು ಒಪ್ಪಿಕೊಳ್ಳುವುದು ಕೂಡ ಮಹತ್ವದ್ದು ಎಂದು ಅವರು ಪ್ರತಿಪಾದಿಸಿದರು.

ಭೌಗೋಳಿಕ ಅಸ್ಮಿತೆಯಲ್ಲ : ‘ಭರತವರ್ಷ ಒಂದು ಭೌಗೋಳಿಕ ಅಸ್ಮಿತೆ ಮಾತ್ರವಲ್ಲ. ಅದರ ಗಾತ್ರ ಕಾಲಾಂತರದಲ್ಲಿ ವಿಸ್ತರಿಸಲೂಬಹುದು, ಕುಗ್ಗಲೂಬಹುದು. ಒಂದು ವಿಶಿಷ್ಟ ಲಕ್ಷಣವನ್ನು ಗರ್ಭೀಕರಿಸಿಕೊಂಡಾಗ ಅದು ಭರತವರ್ಷ ಎಂದು ಕರೆಸಿಕೊಳ್ಳುತ್ತದೆ. ಭಾರತಕ್ಕೆ ತನ್ನದೇ ಆದ ಸ್ವಾಭಾವಿಕ ಗುಣವಿದೆ. ಅದರೊಂದಿಗೆ ಬಾಳಲು ಸಾಧ್ಯವಿಲ್ಲ ಎಂದು ಭಾವಿಸಿದವರು ತಮ್ಮದೇ ಪ್ರತ್ಯೇಕ ರಾಷ್ಟ್ರಗಳನ್ನು ರಚಿಸಿಕೊಂಡಿದ್ದಾರೆ ಎಂದು ಹೇಳಿದರು.

ದೇಶದಲ್ಲೇ ಉಳಿದವರು ಭಾರತದ ಅಸ್ತಿತ್ವ ಉಳಿಯಬೇಕೆಂದು ಬಯಸಿದರು. ಅದು 1947 ಆಗಸ್ಟ್ 15ಕ್ಕಿಂತ ಹಿಂದಿನ ಅಸ್ತಿತ್ವವಾಗಿದೆ. ಅದು ಜಗತ್ತಿನ ವೈವಿಧ್ಯತೆಯನ್ನು ಅಪ್ಪಿಕೊಂಡು ಬೆಳೆಯುವ ಹಿಂದು ಸಮಾಜವಾಗಿದೆ. ಶಾಶ್ವತವಾಗಿರುವ ಒಂದು ಸತ್ಯ ಎಂದಿಗೂ ಬದಲಾಗದು. ‘ವಸುಧೈವ ಕುಟುಂಬಕಂ’ ಎಂಬ ಸಂಸ್ಕೃತ ನುಡಿಯಲ್ಲಿ ಅಂತರ್ಗತವಾಗಿರುವ ಸಿದ್ಧಾಂತದಂತೆ ವೈವಿಧ್ಯತೆಯನ್ನು ಅಪ್ಪಿಕೊಳ್ಳುವ ಸಾಮರ್ಥ್ಯದ ಮೇಲೆ ಹಿಂದು ಸಮಾಜದ ತಳಹದಿಯಿದೆ ಎಂದು ಭಾಗವತ್ ಹೇಳಿದರು.

ಒಗ್ಗಟ್ಟೇ ವೈವಿಧ್ಯ:  ‘ವಿವಿಧತೆಯಲ್ಲಿ ಏಕತೆ’ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ವೈವಿಧ್ಯವೇ ಒಗ್ಗಟ್ಟು ಎನ್ನುವುದನ್ನು ಹಿಂದು ಸಮಾಜ ಅರ್ಥ ಮಾಡಿಕೊಂಡಿದೆ ಎಂದು ಪ್ರತಿಪಾದಿಸಿದರು. ಭಾರತದಲ್ಲಿ ಯಾರೂ ಸಾಮ್ರಾಟರು ಮತ್ತು ಮಹಾರಾಜರನ್ನು ನೆನೆಸಿಕೊಳ್ಳುವುದಿಲ್ಲ. ಆದರೆ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು 14 ವರ್ಷ ವನವಾಸಕ್ಕೆ ಹೋದ ಒಬ್ಬ ರಾಜನನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ ಎಂದು ಭಗವಾನ್ ರಾಮನನ್ನು ಸೂಚ್ಯವಾಗಿ ಪ್ರಸ್ತಾಪಿಸಿ ಭಾಗವತ್ ಹೇಳಿದರು.

ಸಿಂಹಾಸನದ ಮೇಲೆ ಪಾದುಕೆಗಳನ್ನಿಟ್ಟು ಅಣ್ಣ ಮರಳಿದ ನಂತರ ರಾಜ್ಯವನ್ನು ಒಪ್ಪಿಸಿದ ಭರತನನ್ನೂ ಅವರು ಪ್ರಸ್ತಾಪಿಸಿದರು. ಈ ಪಾತ್ರಗಳು ಭಾರತವನ್ನು ವ್ಯಾಖ್ಯಾನಿಸುತ್ತವೆ ಎಂದ ಭಾಗವತ್, ಈ ಮೌಲ್ಯ ಪಾಲಿಸುವವರು ಹಿಂದುಗಳು ಎಂದು ನುಡಿದರು. ಒಳ್ಳೆ ಸಮಯದಲ್ಲಿ ಕೂಡ ಸವಾಲುಗಳು ಏಳುತ್ತವೆ. ಸಮಸ್ಯೆಯ ಸ್ವರೂಪ ಅಪ್ರಸ್ತುತವಾದುದು. ಆದರೆ ಅವುಗಳನನ್ನು ಎದುರಿಸಲು ನಾವು ಹೇಗೆ ಸಿದ್ಧರಾಗಿದ್ದೇವೆ ಎನ್ನುವುದು ಮುಖ್ಯ ಎಂದು ಭಾಗವತ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net