ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ

CTD 26DISTIC ADMINI (2)-03
Published on

ಚಿತ್ರದುರ್ಗ: ಅನೇಕ ಜಾತಿ, ಧರ್ಮಗಳಿರುವ ಭಾರತ ವಿವಿಧೆತೆಯಲ್ಲೂ ಏಕತೆ ಸಾಧಿಸಿರುವುದು ವಿಶೇಷತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದ ಮುರುಘ ರಾಜೇಂದ್ರ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಏಕತೆಯೊಂದಿಗೆ ಪ್ರಗತಿಪಥದಲ್ಲಿ ಸಾಗಿರುವ ಪ್ರಜಾಪ್ರಭುತ್ವ ಹೊಂದಿರುವ ಭಾರತಕ್ಕೆ ಅಂಬೇಡ್ಕರ್ ಅವರು ಬಹುದೊಡ್ಡ ಕೊಡುಗೆಯನ್ನಾಗಿ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ ಎಂದರು.

ಸಂವಿಧಾನದಿಂದಾಗಿ ದೇಶಕ್ಕೆ ಭದ್ರವಾದ ಬುನಾದಿ ದೊರಕಿದೆ. ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು, 18 ದಿನಗಳು ಬೇಕಾಯಿ ತು. ಇದರ ಜಾರಿ ನೆನಪಿಗಾಗಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪರಮ ದೇಶಭಕ್ತ, ವೀರಯೋಧ ವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನ ಇಂದೇ ಆಗಿದೆ ಎಂದು ಸ್ಮರಿಸಿದರು.

ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಆರ್ಥಿಕವಾಗಿ ಬಲಿಷ್ಠವಾಗುತ್ತಿರುವ ಭಾರತ, ಇನ್ನೆರಡು ವರ್ಷಗಳಲ್ಲಿ ಪ್ರಪಂಚದಲ್ಲೇ 3ನೇ ಸ್ಥಾನ ಪಡೆಯಲಿದೆ. ಕೋವಿಡ್ ಸಮರ್ಥವಾಗಿ ಎದುರಿಸಿದ ದೇಶ ನಮ್ಮದು ಎಂದರು.

ಐತಿಹಾಸಿಕ ಜಿಲ್ಲೆ ಚಿತ್ರದುರ್ಗ ವೀರಮದಕರಿ ಆಳಿದ ನಾಡು. ಒನಕೆ ಓಬವ್ವ ನಾಡಿಗೆ ಮಾದರಿ. ಭದ್ರಾ ಮೇಲ್ದಂಡೆ ಯೋಜನೆ, ವೈದ್ಯಕೀಯ ವಿಜ್ಞಾನ ಕಾಲೇಜು,

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಸರ್ಕಾರದಿಂದ ರೈತರಿಗಾಗಿ ಹಲವು ಯೋಜನೆಗಳ ಮೂಲಕ ಜಿಲ್ಲೆ ಅಭಿವೃದ್ಧಿ ಹಾದಿಯಲ್ಲಿ ಸಾಗಿದೆ ಎಂದು ಹೇಳಿದರು.

ಸ್ತ್ರೀಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯುವ ಸಾಮರ್ಥ್ಯ ಯೋಜನೆಗಳು ಜಾರಿಯಾಗುತ್ತಿವೆ. ಜ.31ರಂದು ಸಿಎಂ ಬಸವರಾಜ ಬೊಮ್ಮಾಯಿ ರೈತಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್‌ಪಿಐ ಎಸ್.ಎಸ್.ಯುವರಾಜ್ ನೇತೃತ್ವದಲ್ಲಿ 23 ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ 300 ವಿದ್ಯಾರ್ಥಿನಿಯರು, ಗಾರ್ಡಿಯನ್ ಏಂಜಲ್ ಪ್ರೌಢಶಾಲೆ ಮಕ್ಕಳು, ವೆಸ್ಟ್ರನ್ ಹಿಲ್, ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆ ಮಕ್ಕಳು ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ: ಜಿಲ್ಲೆಯ 13 ಜನ ಸಾಧಕರನ್ನು ಸಚಿವರು ಸನ್ಮಾನಿಸಿದರು. ಕ್ರೀಡಾಪುಟುಗಳಾದ ಸಿ.ಎಸ್.ಪ್ರಜಾ, ಸದ್ದಾಂ ಹುಸೇನ್, ವೈಶಾಲಿ, ಪಿ.ಗುರುರಾಜ್, ಎನ್.ಎಂ.ಛಾಯಾಶ್ರೀ, ಎಂ.ಸಿ.ಲಿಖಿತ್, ವಿ.ರಾಧಾ, ಪ್ರಗತಿಪರ ಕೃಷಿಕ ಬಿ.ಜಿ.ಕೆರೆ ವೀರಭದ್ರಪ್ಪ, ಸೇವಾದಳ ಬೆಳೆವಣಿಯಲ್ಲಿ ಪ್ರಮುಖ ಪಾತ್ರವಹಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಟಿ.ಲೋಕೇಶ್ವರ, ಮೆಹಬೂಬಿ, ಗ್ರಾಮ ಒನ್ ಯೋಜಯಡಿ ಸರ್ಕಾರದ ಯೋಜನೆಗಳನ್ನು ನಾಗರಿಕರಿಗೆ ತಲುಪಿಸಲು ಶ್ರಮಿಸಿದ ಇಸ್ಮಾಯಿಲ್, ಶಿವರಾಜ್, ಹುಸೇನ್ ಅವರನ್ನು ಗೌರವಿಸಲಾಯಿತು. ಮಾಜಿ ಸಚಿವ ಎಚ್.ಏಕಾಂತಯ್ಯ ಗೈರಾಗಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಐವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ರೀದೇವಿ, ಡಿಸಿ ಜಿಆರ್‌ಜೆ ದಿವ್ಯಾಪ್ರಭು, ಎ ಡಿಸಿ ಇ.ಬಾಲಕೃಷ್ಣ, ಎಸಿ ಆರ್.ಚಂದ್ರಯ್ಯ, ಜಿಪಂ ಸಿಇಒ ಎಂ.ಎಸ್.ದಿವಾಕರ್, ಉಪಕಾರ‌್ಯದರ್ಶಿ ಡಾ.ರಂಗಸ್ವಾಮಿ, ಎಸ್ಪಿ ಕೆ.ಪರಶುರಾಂ, ಎಎಸ್‌ಪಿ ಎಚ್.ಕುಮಾರಸ್ವಾಮಿ, ತಹಸೀಲ್ದಾರ್ ನಾಗವೇಣಿ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net