ರಾಷ್ಟ್ರೀಯ ಏಕತೆಯ ಸಮಾವೇಶ; ಸಿಎಂ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Siddaramaiah
Published on

ಬೆಂಗಳೂರು: ಸಂವಿಧಾನ ಜಾರಿಗೆ ಬಂದು 75 ವರ್ಷಾಚರಣೆಯ ಅಂಗವಾಗಿ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆಯ ಸಮಾವೇಶವನ್ನು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ(ಐಸೆಕ್) ಹಾಗೂ ರಾಷ್ಟ್ರೀಯ ಕಾನೂನು ಶಾಲೆ ಸಹಯೋಗದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮಾವೇಶ ಸಂಘಟನಾ ಸಮಿತಿಯ ಪೂರ್ವಭಾವಿ ಸಭೆ ಸೋಮವಾರ ನಡೆಯಿತು. ಸಮಾವೇಶಕ್ಕೆ ಪೂರಕ ಕಾರ್ಯಕ್ರಮ ಮತ್ತು ಸ್ವರೂಪದ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು.

ಸಮಾವೇಶಕ್ಕೆ ಪೂರ್ವಭಾವಿಯಾಗಿ ಜನವರಿ 26ರಿಂದ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಲಾಗುವುದು. ಜಾಥಾವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು, ಸಂವಿಧಾನದ ಮಹತ್ವ, ರಾಷ್ಟ್ರೀಯ ಭಾವೈಕ್ಯತೆ ಕುರಿತಂತೆ ಅರಿವು ಮೂಡಿಸುವ ಕಿರುಚಿತ್ರಗಳು, ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಫೆಬ್ರುವರಿ 24 ಹಾಗೂ 25 ರಂದು ಅರಮನೆ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಮಾವೇಶ ನಡೆಯಲಿದ್ದು, ವಿಚಾರ ಸಂಕಿರಣ ಹಾಗೂ ಓ್ಕಉಐಖ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗುವುದು.

ಸಮಾರೋಪದಲ್ಲಿ ಒಂದು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ವಿವಿಧ ವಿಷಯಗಳ ಕುರಿತ ಪರಿಣತರ ಚರ್ಚೆಯನ್ನು ಆಧರಿಸಿ, ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಇಂದಿನ ಸಮಾಜ ಎದುರಿಸುತ್ತಿರುವ ಎಲ್ಲ ಸಮಸ್ಯೆ, ಸವಾಲುಗಳಿಗೆ ಸಂವಿಧಾನದಲ್ಲಿ ಉತ್ತರವಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಿದೆ. ಸಂಪನ್ಮೂಲ ವ್ಯಕ್ತಿಗಳು ಹಾಗೂ ಅತಿಥಿಗಳನ್ನು ಆಹ್ವಾನಿಸಿ, ಚರ್ಚಾಗೋಷ್ಠಿಗಳನ್ನು ಆಯೋಜಿಸುವಂತೆ ಸಿಎಂ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net