ಟೆಲಿಗ್ರಾಮ್​ ಸಿಇಒ ಪಾವೆಲ್ ಡುರೊವ್ ಬಂಧನದ ಹಿಂದಿನ ರೂವಾರಿ ಅಮೆರಿಕ: ರಷ್ಯಾ ಆರೋಪ

Untitled-design-2024-08-27T203905.585-1
Published on

ಪ್ಯಾರಿಸ್: ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಮೆಸೇಜಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಆಪಾದಿತ ಅಪರಾಧಗಳ ಮೇಲೆ ಫ್ರಾನ್ಸ್‌ನಲ್ಲಿ ಬಂಧಿಸಲಾಯಿತು. ಈ ಬಂಧನದ ಹಿಂದೆ ಅಮೆರಿಕದ ಕೈವಾಡವಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಸಲಹೆಗಾರ ಮಂಗಳವಾರ (ಆಗಸ್ಟ್​​ 27) ಆರೋಪಿಸಿದ್ದಾರೆ.

ಮಕ್ಕಳ ಅಶ್ಲೀಲ ವಿಷಯ, ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ವಹಿವಾಟುಗಳನ್ನು ಒಳಗೊಂಡ ಅಪರಾಧಗಳ ತನಿಖೆಯ ಭಾಗವಾಗಿ ಪಾವೆಲ್​ ಡುರೊವ್​ ಅವರನ್ನು ಫ್ರಾನ್ಸ್‌ನಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಫ್ರೆಂಚ್ ಸರ್ಕಾರ ಸೋಮವಾರ(ಆಗಸ್ಟ್​​ 26) ತಿಳಿಸಿದೆ.

ಫ್ರಾನ್ಸ್ ಮೂಲಕ ಟೆಲಿಗ್ರಾಮ್‌ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ. ರಷ್ಯಾ ಮೂಲದ ಪಾವೆಲ್ ಡುರೊವ್ ಬಂಧನಕ್ಕೆ ಯುನೈಟೆಡ್​ ಸ್ಟೇಟ್ಸ್​ ಹೊಣೆಗಾರರಾಗಿದ್ದಾರೆ ಎಂದು ರಷ್ಯಾದ ಸ್ಟೇಟ್ ಡುಮಾದ ಮುಖ್ಯಸ್ಥ ವ್ಯಾಚೆಸ್ಲಾವ್ ವೊಲೊಡಿನ್ ಆರೋಪಿಸಿದ್ದಾರೆ.

ಅಮೆರಿಕದ ಯಾವುದೇ ಪ್ರಭಾವ ಹೊಂದಿರದ ಹಾಗೂ ಕೆಲವೇ ಕೆಲವು ಅತಿದೊಡ್ಡ ಇಂಟರ್​ನೆಟ್​ ಪ್ಲಾಟ್​ಫಾರ್ಮ್​ಗಳಲ್ಲಿ ಟೆಲಿಗ್ರಾಮ್​ ಒಂದಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಧ್ಯಕ್ಷ ಜೋಬಿಡೆನ್ ಟೆಲಿಗ್ರಾಮ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಯಾವುದೇ ಪುರಾವೆಗಳಿಲ್ಲದೆ ವೊಲೊಡಿನ್ ಆರೋಪಿಸಿದ್ದಾರೆ.

ಟೆಲಿಗ್ರಾಮ್ ಸಂಸ್ಥಾಪಕನ ಬಂಧನಕ್ಕೂ ಫ್ರೆಂಚ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಡೆಯುತ್ತಿರುವ ನ್ಯಾಯಾಂಗ ವಿಚಾರಣೆಯ ಪರಿಣಾಮವಾಗಿ ಡುರೊವ್ ಅವರನ್ನು ಫ್ರಾನ್ಸ್​ನಲ್ಲಿ ಬಂಧಿಸಲಾಯಿತು.ಇದು ಯಾವುದೇ ರೀತಿಯಲ್ಲಿ ರಾಜಕೀಯ ನಿರ್ಧಾರವಲ್ಲ ಎಂದು ಫ್ರಾನ್ಸ್​​​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನ ಸಿಇಒ ಪಾವೆಲ್ ಡುರೊವ್ ಅವರನ್ನುಪ್ಯಾರಿಸ್ ಬಳಿಯ ಲೆಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಶನಿವಾರ (ಆಗಸ್ಟ್​​​ 24) ಬಂಧಿಸಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net