ಸರ್ಕಾರದ ವಿರುದ್ಧ ಸಿಟ್ಟಾದ ಸಚಿವಾಲಯ ನೌಕರರ ಸಂಘ

vidhanasoudha
Published on

ಬೆಂಗಳೂರು: 7ನೇ ವೇತನ ಆಯೋಗದ ಶಿಾರಸು ವಿಚಾರದಲ್ಲಿ ಸಚಿವ ಸಂಪುಟವು ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದು ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ತೀವ್ರ ನಿರಾಸೆ ಮತ್ತು ಆಕ್ರೋಶವನ್ನುಂಟು ಮಾಡಿದೆ ಎಂದು ಸಚಿವಾಲಯ ನೌಕರರ ಸಂಘ ಹೇಳಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಂಗದ ಅಧ್ಯಕ್ಷ ರಮೇಶ್ ಸಂಗಾ, ಸರ್ಕಾರವು ವೇತನ ಆಯೋಗದ ಜಾರಿಯ ಕುರಿತು ಇನ್ನೂ ಉದಾಸೀನ ಧೋರಣೆ ತಾಳಿದಲ್ಲಿ, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗೂ ನೌಕರರು ಸಿದ್ಧ ಎಂಬ ಎಚ್ಚರಿಕೆಯನ್ನು ಕೊಡಬಯಸುತ್ತೇವೆ ಎಂದಿದ್ದಾರೆ.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸಿದ ಸಂದರ್ಭದಲ್ಲಿ, ನಮ್ಮ ಸಂಘವು ಕೂಡಲೇ ವರದಿ ಜಾರಿ ಮಾಡುವಂತೆ ಒತ್ತಾಯಿಸಿತ್ತು. ಈ ವೇಳೆ ಮುಖ್ಯಮಂತ್ರಿಯವರು ಚುನಾವಣೆ ನಂತರ ವರದಿ ಜಾರಿ ಮಾಡುವ ಆಶ್ವಾಸನೆ ನೀಡಿದ್ದರು. ಆದರೆ ಪ್ರಸ್ತುತ, ಚುನಾವಣೆ ಮುಕ್ತಾಯವಾಗಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವರದಿ ಜಾರಿಗೊಳಿಸುವ ಬಗ್ಗೆ ನಿರ್ಣಯಿಸಲಾಗುತ್ತದೆ ಎಂದು ನಂಬಿಕೆ ಇರಿಸಿದ್ದೆವು ಎಂದು ಸಂಗಾ ಹೇಳಿದ್ದಾರೆ.
ಈಗಾಗಲೇ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಶೇ. 27.5 ಫಿಟ್ಮೆಂಟಿಗೆ ಶೇ. 2.5 ರಷ್ಟು ಸೇರಿಸಿ, ಒಟ್ಟು ಕನಿಷ್ಟ ಶೇ. 30 ರಷ್ಟು ಫೈಟ್ಮೆಂಟ್ನೊಂದಿಗೆ ಕೂಡಲೇ ವೇತನ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net