

ನವದೆಹಲಿ: ಶಂಕರ್ ಹೆಸರಿನ ಆಫ್ರಿಕನ್ ಆನೆ ( African Elephant Shankar ) ಯ ಆರೋಗ್ಯ ಮತ್ತು ಆವಾಸಸ್ಥಾನವನ್ನು ಸುಧಾರಿಸುವಲ್ಲಿ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ( Kirti Vardhan Singh ) ಅವರ ಪ್ರಯತ್ನಗಳು ಫಲ ನೀಡುತ್ತಿವೆ. ಶುಕ್ರವಾರ ( ಅ. 11) ಶಂಕರ್ ಆನೆಯನ್ನು ಅದರ ಸರಪಳಿಯಿಂದ ಬಿಡುಗಡೆಗೊಳಿಸಲಾಯಿತು. ಖುಷಿಯ ಸಂಗತಿ ಏನೆಂದರೆ, ದೆಹಲಿ ಮೃಗಾಯಲ ( Zoo ) ದಲ್ಲಿ ತನ್ನ ಆವರಣದಲ್ಲಿ ಆನೆ ಲವಲವಿಕೆಯಿಂದ ಓಡಾಡುತ್ತಿರುವುದು ಕಂಡುಬಂದಿದೆ.
ಶಂಕರ್ ಆನೆಗೆ ಸಂಬಂಧಿಸಿದ ವಿಡಿಯೋವನ್ನು ಕೇಂದ್ರ ಸಚಿವ ಕೀರ್ತಿವರ್ಧನ್ ಸಿಂಗ್, ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಕ್ಟೋಬರ್ 9 ರಂದು ನಾನು ಮೃಗಾಲಯಕ್ಕೆ ಭೇಟಿ ನೀಡಿ, ಒಂಟಿ ಆಫ್ರಿಕನ್ ಆನೆ ಶಂಕರ್ನನ್ನು ಭೇಟಿಯಾದ ನಂತರ, ಗುಜರಾತಿನ ಜಾಮ್‌ನಗರದ ವಂತಾರಾ ಟೀಮ್ ಮತ್ತು ಪರಿಣಿತ ಪಶುವೈದ್ಯರನ್ನು ಪರಿಸರ ಸಚಿವಾಲಯ ಒಟ್ಟುಗೂಡಿಸಿತು. ನಮ್ಮ ಪ್ರಯತ್ನದ ಫಲವಾಗಿ ಕೊನೆಗೂ ‘ಶಂಕರ್’ ತನ್ನ ಸರಪಳಿಯಿಂದ ಸ್ವತಂತ್ರನಾಗಿದ್ದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ನೀರಜ್, ಯದುರಾಜ್, ದಕ್ಷಿಣ ಆಫ್ರಿಕಾದ ಡಾ. ಆಡ್ರಿಯನ್, ಫಿಲಿಪೈನ್ಸ್‌ನ ಮೈಕೆಲ್ ಸೇರಿದಂತೆ ತಂಡದ ನಿರಂತರ ಪ್ರಯತ್ನಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕ್ರಿಯಾ ಯೋಜನೆಯ ಪ್ರಕಾರ ಆಫ್ರಿಕನ್ ಆನೆಯ ಪುನರ್ವಸತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಕೀರ್ತಿವರ್ಧನ್ ಸಿಂಗ್ ತಿಳಿಸಿದ್ದಾರೆ.
ಆಫ್ರಿಕನ್ ಆನೆ ಶಂಕರ್ನ ದೈಹಿಕ ಆರೋಗ್ಯವನ್ನು ಸುಧಾರಿಸಲು ಕೇಂದ್ರ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರ ನಿರಂತರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಸಚಿವರ ಸೂಚನೆಗಳನ್ನು ಅನುಸರಿಸಿ, ತಂಡವು ಶಂಕರ್ ಆನೆಯ ನಡವಳಿಕೆಯನ್ನು ಹಗಲಿರುಳು ಮೇಲ್ವಿಚಾರಣೆ ಮಾಡಿತ್ತು. ಅಲ್ಲದೆ, ಪಶುವೈದ್ಯರು ಮತ್ತು ತರಬೇತಿ ಪಡೆದ ಮಾವುತರು ಶಂಕರ್ನನ್ನು ಶಾಂತಗೊಳಿಸಲು ನಿರಂತರವಾಗಿ ಕೆಲಸ ಮಾಡಿದ್ದಾರೆ. ಅ. 11 ರಂದು, ತಂಡವು ಯಾವುದೇ ಔಷಧಿಯ ಬಳಕೆಯಿಲ್ಲದೆ ಶಂಕರ್ ಆನೆಯನ್ನು ಸರಪಳಿಯಿಂದ ಯಶಸ್ವಿಯಾಗಿ ಮುಕ್ತಗೊಳಿಸಿತು.
ಮುಂದಿನ ಎರಡ್ಮೂರು ದಿನಗಳ ಕಾಲ ಶಂಕರ್ ಆನೆಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಮತ್ತು ಪ್ರಸ್ತುತ ಮೃಗಾಲಯದಲ್ಲಿರುವ ಮಾವುತರು ಆನೆಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಲು ತರಬೇತಿಯನ್ನು ಪಡೆಯಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ. ಶಂಕರ್ ಆನೆಯ ನಡವಳಿಕೆ ಮತ್ತು ದಿನಚರಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ, ಆನೆಯ ಸಂಬಂಧಿಸಿದ ವೇಳಾಪಟ್ಟಿಯೊಂದಿಗೆ ವೈಯಕ್ತಿಕಗೊಳಿಸಿದ ಆಹಾರ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಶಂಕರ್ ಆನೆಯ ಪ್ರಗತಿಯನ್ನು ಪರಿಶೀಲಿಸಲು ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಫಿಲಿಪೈನ್ಸ್‌ನ ಮಹೌತ್ ಮೈಕೆಲ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಶುಕ್ರವಾರ ಶಂಕರ್ ಆನೆ ಮೊದಲಿಗಿಂತ ಹೆಚ್ಚು ನಿರಾಳವಾಗಿ ಕಾಣಿಸಿಕೊಂಡಿತು. (ಏಜೆನ್ಸೀಸ್)