ದುರ್ಗಾದೇವಿಯ ಮುಂದೆ ನಿಂತು ಅಶ್ಲೀಲ ಫೋಟೋಶೂಟ್​! ಮಾಡೆಲ್​ಗಳ ದುರ್ವರ್ತನೆ, ನೆಟ್ಟಿಗರ ತರಾಟೆ | Models Photoshoot

Models Photoshoot
Published on

ನವದೆಹಲಿ: ಇಡೀ ದೇಶವೇ ನವರಾತ್ರಿ ಸಂಭ್ರಮದಲ್ಲಿ ಮುಳುಗಿದೆ. ದುರ್ಗಾಪೂಜೆ ನಿಮಿತ್ತ ವಿವಿಧೆಡೆ ಸುಂದರ ಮಂಟಪಗಳನ್ನು ಸಿದ್ಧಪಡಿಸಲಾಗಿದೆ. ಕಳೆದ ಎಂಟು ದಿನಗಳಿಂದ ದುರ್ಗಾ ದೇವಿಗೆ ಒಂದೊಂದು ದಿನ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ನವರಾತ್ರಿಯ 9ನೇ ಹಾಗೂ ಅಂತಿಮ ದಿನವಾದ ಇಂದು ಬಹಳ ವಿಜೃಂಭಣೆಯಿಂದ ಪೂಜಾ ಕೈಂಕರ್ಯಗಳು ನಡೆಯಲಿದೆ.

ಇನ್ನು ನವರಾತ್ರಿಯ ಪೂಜೆಯ ಭಾಗವಾಗಿ ಎಲ್ಲರೂ ದುರ್ಗಾ ಪೂಜೆಯ ಮಂಟಪಕ್ಕೆ ಭೇಟಿ ಕೊಟ್ಟು, ದೇವಿಯ ರೂಪದ ಪಕ್ಕದಲ್ಲಿ ಚಿತ್ರಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಅಂಥದ್ದೇ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ಮಾಡೆಲ್‌ಗಳಾದ ಹಿಮಶ್ರೀ ಭದ್ರ ಮತ್ತು ಸನ್ನತಿ ಮಿತ್ರ ದುರ್ಗಾ ಪೂಜೆಯ ಮಂಟಪದಲ್ಲಿ ತಮ್ಮ ಮತ್ತೊಬ್ಬ ಸ್ನೇಹಿತೆಯ ಜತೆಗೆ ತೆಗೆಸಿಕೊಂಡಿರುವ ಫೋಟೋ ( Models Photoshoot ) ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಭದ್ರ ಮತ್ತು ಮಿತ್ರ ಮಿಸ್​ ಕೋಲ್ಕತ್ತಾ ಟೈಟಲ್​ ಹೊಂದಿದ್ದಾರೆ. ಈ ಇಬ್ಬರು ಮಾಡೆಲ್​ಗಳು ತುಂಬಾ ಹಾಟ್​ ಆಗಿರುವ ಉಡುಗೆ ಧರಿಸಿ, ದೇವಿಯ ಮಂಟಪಕ್ಕೆ ಬಂದು ಫೋಟೋ ತೆಗೆಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಭಾರಿ ಟೀಕೆ ಮಾಡುತ್ತಿದ್ದಾರೆ.

ಪಬ್‌ಗೆ ಹೋದಾಗ ಅಥವಾ ನೈಟ್ ಪಾರ್ಟಿಗಳಲ್ಲಿ ಭಾಗವಹಿಸಿದಾಗ ಧರಿಸುವ ಬಟ್ಟೆಯನ್ನು ಧರಿಸಿ ಪೂಜಾ ಸ್ಥಳಕ್ಕೆ ಬಂದು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಲು ಪ್ರಯತ್ನಿಸಿರುವುದು ಅವಿವೇಕತನ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ತಮಗೆ ಬೇಕಾದುದನ್ನು ಧರಿಸಲು ಸ್ವಾತಂತ್ರ್ಯ ಇದೆ ಎಂದು ಭಾವಿಸಿ ಅನುಚಿತವಾಗಿ ಉಡುಗೆ ಧರಿಸುವುದು ತಪ್ಪು ಎಂದು ಟೀಕಿಸಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ ದೀಪಿಕಾ ಭಾರಧ್ವಾಜ್ ಪ್ರತಿಕ್ರಿಯಿಸಿ, ಜನರ ಗಮನ ಸೆಳೆಯಲು ಮತ್ತು ವೈರಲ್ ಆಗಲು ಇಂತಹ ನಡೆಗಳನ್ನು ಅನುಸರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಇನ್ನು ವಿವಾದಾತ್ಮಕ ಚಿತ್ರವನ್ನು ಹಂಚಿಕೊಂಡಿರುವ ಸನ್ನತಿ ಮಿತ್ರ, ದೈವತ್ವದ ಉಪಸ್ಥಿತಿಯಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ಮಾತ್ರ ಮಾಡೆಲ್​ ವಿರುದ್ಧ ಟೀಕೆಗಳ ಮಹಾಪೂರವೇ ಹರಿದುಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net