ಎಚ್​ಡಿಕೆ ಮೂಗಿನಿಂದ ದಿಢೀರ್​ ರಕ್ತಸ್ರಾವ! ಆಸ್ಪತ್ರೆ ಸೇರಿದ ಕೇಂದ್ರ ಸಚಿವ

ವಿಜಯವಾಣಿ - 2024-07-28T191217.133
Published on

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಜೆಡಿಎಸ್​ ಮತ್ತು ಬಿಜೆಪಿ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆದಿದ್ದು, ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ, ಸಭೆಯಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಸಭೆ ಮುಗಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಅವರ ಮೂಗಿನಿಂದ ದಿಢೀರ್ ರಕ್ತಸ್ರಾವವಾಗಿದ್ದು, ತಕ್ಷಣವೇ ಕೇಂದ್ರ ಸಚಿವರನ್ನು ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್​. ಯಡಿಯೂರಪ್ಪ ಸ್ಥಳದಲ್ಲಿ ಉಪಸ್ಥಿತರಿದ್ದರು. ಮೂಗಿನಿಂದ ರಕ್ತಸ್ರಾವ ಆದ ತಕ್ಷಣವೇ ಎಚ್ಚೆತ್ತುಕೊಂಡ ಎಚ್​ಡಿಕೆ, ತಮ್ಮ ಕೈಗವಸಿನಿಂದ ಮೂಗನ್ನು ಒರೆಸಿಕೊಂಡಿದ್ದಾರೆ. ಅವರು ಧರಿಸಿದ್ದ ಶರ್ಟಿನ ಮೇಲೂ ರಕ್ತದ ಹನಿಗಳು ಬಿದ್ದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ತಂದೆಯ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ನಿಖಿಲ್, ಆತಂಕಪಡುವ ಅಗತ್ಯವಿಲ್ಲ. ತಂದೆ ಆರೋಗ್ಯವಾಗಿದ್ದಾರೆ. ಕೆಲವು ದಿನಗಳಿಂದ ಕೆಲಸದ ಒತ್ತಡವಿದ್ದ ಕಾರಣ ವಿಶ್ರಾಂತಿಸಲು ಸಮಯ ಸಿಕ್ಕಿಲ್ಲ. ಇದು ಸ್ವಲ್ಪ ತೊಂದರೆಯಾಗಿ ಕಾಡಿದೆ ಅಷ್ಟೇ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net