ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ಗೆ ಎಸ್​ಒಜಿ ನೋಟಿಸ್​

gajendra singh shekhawat
Published on

ಜೈಪುರ: ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದ ರಾಜಸ್ಥಾನ ಪೊಲಿಸ್​ ಪಡೆಯ ವಿಶೇಷ ಕಾರ್ಯಾಚರಣೆ ಪಡೆ (ಎಸ್​ಒಜಿ) ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರಿಗೆ ವಿಚಾರಣೆಗೆ ಹಾಜರಾಗಿ, ಹೇಳಿಕೆ ದಾಖಲಿಸುವಂತೆ ನೋಟಿಸ್​ ನೀಡಿದೆ.

ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮೂಲಕ ಗಜೇಂದ್ರ ಸಿಂಗ್​ ಶೇಖಾವತ್​ ಅವರಿಗೆ ನೋಟಿಸ್​ ತಲುಪಿಸಲಾಗಿದೆ ಎಂದು ಎಸ್​ಒಜಿಯ ಹೆಚ್ಚುವರಿ ಮಹಾಪ್ರಧಾನ ನಿರ್ದೇಶಕ ಅಶೋಕ್​ ರಾಥೋಡ್​ ತಿಳಿಸಿದ್ದಾರೆ.

ಗೆಹ್ಲೋಟ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿ ದೂರವಾಣಿಯಲ್ಲಿ ಮಾತುಕತೆ ಮಾಡಲಾಗಿದೆ ಎಂದು ಹೇಳಲಾದ ಮೂರು ಧ್ವನಿತುಣುಕುಗಳು (ಆಡಿಯೋ ಕ್ಲಿಪ್​) ಸಿಕ್ಕಿವೆ. ಅವು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ವೈರಲ್​ ಆಗಿವೆ. ಅವುಗಳ ಪೈಕಿ ಒಂದು ಧ್ವನಿತುಣುಕಿನಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮತ್ತು ಕಾಂಗ್ರೆಸ್​ನ ಬಂಡಾಯ ಶಾಸಕರ ನಡುವೆ ನಡೆದಿದೆ ಎನ್ನಲಾದ ಮಾತುಕತೆ ದಾಖಲಾಗಿದೆ. ಆದ್ದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್​ನ ಮುಖ್ಯಸಚೇತಕ ಮಹೇಶ್​ ಜೋಡಿ ನೀಡಿದ್ದ ದೂರನ್ನು ಆಧರಿಸಿ ಎಸ್​ಒಜಿ ಎರಡು ಪ್ರತ್ಯೇಕ ಎಫ್​ಐಆರ್​ಗಳನ್ನು ದಾಖಲಿಸಿಕೊಂಡಿತ್ತು.

ಆ ಧ್ವನಿತುಣುಕುಗಳಲ್ಲಿ ಇರುವ ಕಾಂಗ್ರೆಸ್​ನ ಬಂಡಾಯ ಶಾಸಕರ ಧ್ವನಿಯನ್ನು ಭನ್ವರ್​ಲಾಲ್​ ಶರ್ಮ ಹಾಗೂ ಮಧ್ಯವರ್ತಿ ಸಂಜಯ್​ ಜೈನ್​ ಅವರದ್ದು ಎಂದು ಗುರುತಿಸಿ ಎಫ್​ಐಆರ್​ನಲ್ಲಿ ಹೆಸರಿಸಲಾಗಿತ್ತು. ಇದರ ಬೆನ್ನಲ್ಲೇ ಸಂಜಯ್​ ಜೈನ್​ ಅವರನ್ನು ಬಂಧಿಸಿದ್ದ ಎಸ್​ಒಜಿ, ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಆದರೆ ಕಾಂಗ್ರೆಸ್​ನ ಈ ಎಲ್ಲ ಆರೋಪಗಳನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಮತ್ತು ಬಂಡಾಯ ಶಾಸಕ ಎನ್ನಲಾದ ಭನ್ವರ್​ಲಾಲ್​ ಶರ್ಮ ತಿರಸ್ಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net