ರಾಮಮಂದಿರದ ಗರ್ಭಗುಡಿಯಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲು; ಆ.3ರಿಂದ ಧಾರ್ಮಿಕ ಕಾರ್ಯಕ್ರಮ

Ram Mandir
Published on

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಆಗಸ್ಟ್​ 5ರಂದು ನಡೆಯಲಿದ್ದು, ಆ.3ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.

ಭೂಮಿ ಪೂಜೆಯಂದು ಮಂದಿರದ ಗರ್ಭಗುಡಿಯ ಸ್ಥಳದಲ್ಲಿ 40 ಕೆಜಿ ತೂಕದ ಬೆಳ್ಳಿಯ ಹಾಸುಗಲ್ಲನ್ನು ಸ್ಥಾಪಿಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಮುಖ್ಯಸ್ಥ ಮಹಾಂತ್​ ನೃತ್ಯ ಗೋಪಾಲ್​ ದಾಸ್​ ಅವರ ವಕ್ತಾರ ಮಹಾಂತ್​ ಕಮಲ ನಯನ ದಾಸ್​ ಅವರು ತಿಳಿಸಿದ್ದಾರೆ.

ವಾರಾಣಸಿಯ ಪುರೋಹಿತರ ನೇತೃತ್ವದಲ್ಲಿ ರಾಮಮಂದಿರ ಭೂಮಿಪೂಜಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್​ 3ರಿಂದಲೇ ಕಾರ್ಯಕ್ರಮಗಳು ಶುರುವಾಗಲಿದ್ದು, ಆಗಸ್ಟ್​4ರಂದು ರಾಮಾಚಾರ್ಯಾ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಂದಿರಕ್ಕೆ ಅಡಿಗಲ್ಲು ಸ್ಥಾಪನೆ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಪುರೋಹಿತರು ಮುಹೂರ್ತವನ್ನು ನೋಡಿ, ಈ ಸಮಯವನ್ನು ನಿಗದಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಆದರೆ ಅವರು ಭೂಮಿ ಪೂಜೆಗೆ ಆಗಮಿಸುವ ಬಗ್ಗೆ, ಒಂದೊಮ್ಮೆ ಬಂದರೂ ಯಾವ ಸಮಯದಲ್ಲಿ ಬರುತ್ತಾರೆ ಎಂಬ ಬಗ್ಗೆ ಇನ್ನೂ ಪ್ರಧಾನಿ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಟ್ರಸ್ಟ್​ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net