

ಮೈಸೂರು: ಸಾಂಸ್ಕೃತಿಕ ನಗರ ಮೈಸೂರು ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಅಮಿತ್ ಶಾ, ಶ್ರೀಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಮಠದ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಅತಿಥಿಗೃಹದ ಉದ್ಘಾಟನೆ ಮಾಡಿ ಭಾಷಣ ಮಾಡಿದ್ದಾರೆ.
ಸುತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಭಾಷಣದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ಸಾಂಸ್ಕೃತಿಕ ಪುನರ್ ಪ್ರತಿಷ್ಠಾಪನೆಯಾಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಕಾಶಿ, ಉಜ್ಜಯಿನಿ ಬದ್ರಿನಾಥ್ ಕಾರಿಡಾರ್ ಅಭಿವೃದ್ಧಿ ಆಗಿವೆ. ದೇಶದಲ್ಲಿ ಆಯುರ್ವೇದ, ಯೋಗ, ಭಾಷೆ, ಸಂಸ್ಕೃತಿ ಪುನರ್ ಸ್ಥಾಪನೆ ಆಗುತ್ತಿದೆ. ಸುತ್ತೂರು ಮಠವೂ ಅಯೋಧ್ಯೆಯಲ್ಲಿ ಅತಿಥಿ ಗೃಹ ನಿರ್ಮಿಸುತ್ತಿದೆ ಎಂದಿದ್ದಾರೆ.
ಸುತ್ತೂರು ಸ್ವಾಮೀಜಿ ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಸುತ್ತೂರು ಮಠದ 24 ಪೀಠಾಧ್ಯಕ್ಷರನ್ನು ಸ್ಮರಿಸುತ್ತೇನೆ. ಕರ್ನಾಟಕದ ಈ ಪವಿತ್ರ ನೆಲದಲ್ಲಿ ನಿಂತು ಬಸವಣ್ಣನವರನ್ನು ನೆನೆಯುತ್ತೇನೆ. ಬಸವಣ್ಣ ಅವರು ಒಂದು ವರ್ಗಕ್ಕೆ ಸೀಮಿತವಾಗಿರದೆ ದೇಶದ ಕೋಟಿ ಕೋಟಿ ಜನರಿಗೆ ಭಕ್ತಿ ಭಾವ ತುಂಬಿದವರಾಗಿದ್ದಾರೆ ಅವರನ್ನು ಕೂಡಾ ನಾನು ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಸುತ್ತೂರು ಮಠಾಧಿಶರು ಎಲ್ಲರೂ ನಿಸ್ವಾರ್ಥವಾದ ಸೇವೆಯನ್ನು ಸಲ್ಲಿಸಿದ್ದಾರೆ. ಅನ್ನ, ಅಕ್ಷರ ದಾಸೋಹ ನೀಡುತ್ತಿದೆ. ಲಕ್ಷಾಂತರ ಜನರಿಗೆ ಬೆಳಕನ್ನು ಚೆಲ್ಲುವ ಕೆಲಸ ಮಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಅವರ ಸೇವೆಯನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ನಾನು ನಿನ್ನೆ ಸುತ್ತೂರಿಗೆ ಬರಬೇಕಿತ್ತು. ಇಂದು ಅಹಮದಾಬಾದ್‌ಗೆ ಹೋಗಬೇಕಿತ್ತು. ಅಹಮದಾಬಾದ್ ಕಾರ್ಯಕ್ರಮ ರದ್ದು ಮಾಡಿ ಯಾಕೆ ಸುತ್ತೂರಿಗೆ ಹೋಗುತ್ತಿದ್ದೀರಿ ಎಂದು ಪತ್ರಕರ್ತರು ಕೇಳಿದರು? ನಾನು ಬಿಲ್ಡಿಂಗ್ ಉದ್ಘಾಟಿಸಲು ಹೋಗುತ್ತಿಲ್ಲ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ ಅಂತ ಹೇಳಿದೆ. ಸುತ್ತೂರು ಮಠದ ಕೊಡುಗೆ ಸ್ಮರಿಸಿ ಮಾತು ಮುಗಿಸುತ್ತೇನೆ ಎಂದಿದ್ದಾರೆ.
ಈ ಜಾತ್ರೆಯಲ್ಲಿ ಕೊಂಡೋತ್ಸವ. ತೆಪ್ಪೋತ್ಸವ, ರಥೋತ್ಸವ, ಕುಸ್ತಿ, ಸಾಮೂಹಿಕ ವಿವಾಹ ಹೀಗೆ ಎಲ್ಲವೂ ನಡೆಯ ಈ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಕೆ ಆಗುತ್ತಿದೆ. ಮಠದಲ್ಲಿ 20 ಸಾವಿರ ಶಿಕ್ಷಕರು, ಒಂದು ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶ್ರೀ ಅಂಗವಿಕಲರಿಗಾಗಿ ಪಾಲಿಟೆಕ್ನಿಕ್ ಕಾಲೇಜನ್ನೂ ನಡೆಸುತ್ತಿದ್ದಾರೆ.