ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗ ಪ್ರವಾಸ

B y Raghavendra
ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ
Published on

ಶಿವಮೊಗ್ಗ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಫೆ.22ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು ಏಳು ಜಿಲ್ಲೆಗಳಿಗೆ ಸಂಬಂಧಿಸಿದ 6,168.41 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. 2,138.30 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ 2ಕ್ಕೆ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ಸಂಬಂಧಿಸಿದ 296.92 ಕಿಮೀ ಉದ್ದದ ಒಟ್ಟು 18 ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವರು ನೆರವೇರಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 139.41 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ 4 ಕಾಮಗಾರಿಗಳನ್ನು ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡಲಿದ್ದಾರೆ. 2,138.30 ಕೋಟಿ ರೂ. ವೆಚ್ಚದ 6 ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಪ್ರಮುಖರಾದ ದೀನದಯಾಳ್, ವಿನ್ಸೆಂಟ್ ರೊಡ್ರಿಗಸ್, ಮಂಜುನಾಥ್ ನವಲೆ, ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇತರರಿದ್ದರು.
ಉದ್ಘಾಟನೆ ಆಗುತ್ತಿರುವ ಕಾಮಗಾರಿಗಳು: ಮಡೋಡಿ, ಮತ್ತಿಮನೆ, ನಗರ, ಆರೋಡಿ, ಕಾರಣಗಿರಿ, ಮಾವಿನಕೊಪ್ಪ, ಬ್ರಹ್ಮೇಶ್ವರ ಏಳು ಕಿರು ಸೇತುವೆ-19.77 ಕೋಟಿ ರೂ., ಶಿವಮೊಗ್ಗ ವಿದ್ಯಾನಗರದಲ್ಲಿ ರೈಲ್ವೆ ಮೇಲ್ಸೇತುವೆ-43.90 ಕೋಟಿ ರೂ., ಶಿವಮೊಗ್ಗದಲ್ಲಿ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಸೇತುವೆ-20.12 ಕೋಟಿ ರೂ., ತೀರ್ಥಹಳ್ಳಿಯಲ್ಲಿ ತುಂಗಾ ನದಿಗೆ ಸೇತುವೆ ಹಾಗೂ ಬೈಪಾಸ್ ರಸ್ತೆ-55.52 ಕೋಟಿ ರೂ.
ಶಂಕುಸ್ಥಾಪನೆ ಆಗಲಿರುವ ಕಾಮಗಾರಿಗಳು:ಮಾವಿನಕೊಪ್ಪ-ಆಡುಗೋಡಿ ಹೆದ್ದಾರಿ, ಬೆಕ್ಕೋಡಿ ಮತ್ತು ಹೊಸನಗರ ಬಳಿ ಸೇತುವೆ-313.56 ಕೋಟಿ ರೂ., ತ್ಯಾವರೆಕೊಪ್ಪ-ಆನಂದಪುರ ಚತುಷ್ಪಥ ರಸ್ತೆ, ಎರಡು ರೈಲ್ವೆ ಮೇಲ್ಸೇತುವೆ-653. ಕೋಟಿ ರೂ., ಹೊಸೂರು, ತಾಳಗುಪ್ಪ ಬಳಿ ರೈಲ್ವೆ ಮೇಲ್ಸೇತುವೆ, ಬೈಪಾಸ್ ರಸ್ತೆ ನಿರ್ಮಾಣ-198.58 ಕೋಟಿ ರೂ., ಶಿವಮೊಗ್ಗ ಬೈಪಾಸ್‌ನಿಂದ ಹರಕೆರೆವರೆಗೆ ಚತುಷ್ಪಥ ರಸ್ತೆ-39.50 ಕೋಟಿ ರೂ., ಬೈಂದೂರು-ನಾಗೋಡಿವರೆಗೆ ದ್ವಿಪಥ ರಸ್ತೆ ನಿರ್ಮಾಣ-394.95 ಕೋಟಿ ರೂ., ತೀರ್ಥಹಳ್ಳಿ ತಾಲೂಕು ನೆಲ್ಲಿಸರ-ತೀರ್ಥಹಳ್ಳಿ ಚತುಷ್ಪಥ ರಸ್ತೆ ನಿರ್ಮಾಣ-538.71 ಕೋಟಿ ರೂ.
ಮೂರು ಕಾಮಗಾರಿಗಳಿಗೆ ಪ್ರಸ್ತಾವನೆ: ಶಿವಮೊಗ್ಗ-ಹೊಳಲೂರು-ಹೊನ್ನಾಳಿ-ಹರಿಹರ-ಹಗರಿಬೊಮ್ಮನಹಳ್ಳಿ-ಮರಿಯಮ್ಮನಹಳ್ಳಿವರೆಗೆ 182 ಕಿಮೀ, ಸಾಗರ-ಸೊರಬ-ಹಾನಗಲ್ ಬಂಕಾಪುರದ 108.50 ಕಿಮೀ, ಆಯನೂರು-ರಿಪ್ಪನ್‌ಪೇಟೆ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ-ಗಂಗೊಳ್ಳಿವರೆಗಿನ 163 ಕಿಮೀ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೇ ಸುಮಾರು ಎರಡು ಸಾವಿರ ಕೋಟಿ ರೂ. ಮೊತ್ತದ ಏಳು ಕಾಮಗಾರಿಗಳು ಮಂಜೂರಾತಿ ಪ್ರಕ್ರಿಯೆಯಲ್ಲಿವೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
ಕೊಡಚಾದ್ರಿಗೆ ಕೇಬಲ್ ಕಾರ್: ರಾಜ್ಯದ ಮೊದಲ ಕೇಬಲ್ ಕಾರ್ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೊಡಚಾದ್ರಿ-ಕೊಲ್ಲೂರು ಕೇಬಲ್ ಕಾರ್ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. 380 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಲಿದೆ. ಯೋಜನೆ ಆರಂಭವಾಗುವ ಹಾಗೂ ಅಂತ್ಯವಾಗುವ ಸ್ಥಳವನ್ನು ಗುರುತಿಸಿ ಡಿಪಿಆರ್ ಸಿದ್ಧಪಡಿಸಲಾಗಿದೆ. ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಪಡೆಯುವ ಸಂಬಂಧ ಹಾಗೂ ವನ್ಯಜೀವಿ ಮಂಡಳಿಯಿಂದ ನಿರಕ್ಷೇಪಣಾ ಪತ್ರ ಪಡೆಯಲು ಕಳೆದ ವಾರ ಉಡುಪಿ ಜಿಲ್ಲಾಧಿಕಾರಿ, ಪ್ರವಾಸೋದ್ಯಮ, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net