

ಬೆಂಗಳೂರು ವ್ಯಾಸಂಗದ ಸಮಯದಲ್ಲಿಯೇ ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ತರಬೇತಿ ಮೂಲಕ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ಶಿಕ್ಷಣ ಕ್ಷೇತ್ರಗಳಿಗೆ ನೀಡಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಇದಕ್ಕಾಗಿ 1.25,,638 ಕೋಟಿ ರೂ. ಗಳನ್ನು ಅನುದಾನ ನೀಡಲಾಗಿದೆ.
500 ಕಂಪನಿಗಳಲ್ಲಿ ಇಂಟರ್ನ್‌ಶಿಪ್
ಒಂದು ಕೋಟಿ ಯುವಕರಿಗೆ ಮುಂದಿನ ಐದು ವರ್ಷಗಳಲ್ಲಿ ದೇಶದ 500 ಟಾಪ್ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸಲಿದೆ. ವಿವಿಧ ವೃತ್ತಿಪರ ಹಾಗೂ ಉದ್ಯೋಗಾವಕಾಶಗಳಿಗಾಗಿ ಒಂದು ವರ್ಷದ ಅವಧಿಗೆ ವಿದ್ಯಾರ್ಥಿಗಳು ವಾಸ್ತವ ವಹಿವಾಟಿನ ಅನುಭವವನ್ನು ಪಡೆಯಲಿದ್ದಾರೆ. ಪ್ರತಿ ತಿಂಗಳಿಗೆ ಸರ್ಕಾರದಿಂದ ಐದು ಸಾವಿರ ರೂ. ಹಾಗೂ ಕಂಪನಿ ವತಿಯಿಂದ ಒಂದು ಬಾರಿಯ ನೆರವಾಗಿ 6 ಸಾವಿರ ರೂ. ಸೇರಿ ಮಾಸಿಕ 11 ಸಾವಿರ ರೂ.ಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಕಂಪನಿಗಳು ಸಿಎಸ್‌ಆರ್ ನಿಧಿಯನ್ವಯ ತರಬೇತಿ ವೆಚ್ಚ ಹಾಗೂ ಇಂಟರ್ನ್‌ಶಿಪ್‌ನ ಶೇ.10 ವೆಚ್ಚ ಭರಿಸಬೇಕಾಗಲಿದೆ.
1,000 ಐಟಿಐಗಳು ಮೇಲ್ದರ್ಜೆಗೆ
ಹಬ್ ಆ್ಯಂಡ್ ಸ್ಪೋಕ್ ಮಾದರಿಯಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು ಒಂದು ಸಾವಿರ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಜ್ಯಗಳು ಮತ್ತು ಉದ್ಯಮಗಳ ಸಹಭಾಗಿತ್ವದ ಕೇಂದ್ರೀಯ ಪುರಸ್ಕೃತ ಯೋಜನೆ ಇದಾಗಿದೆ. ಐದು ವರ್ಷಗಳಲ್ಲಿ ಇದಕ್ಕಾಗಿ 60 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. ಇದರಲ್ಲಿ ಕೇಂದ್ರದ ಪಾಲು 30 ಸಾವಿರ ಕೋಟಿ ರೂ.ಗಳಾದರೆ, ರಾಜ್ಯದಿಂದ 20 ಸಾವಿರ ಹಾಗೂ ಉದ್ಯಮಗಳಿಂದ 10 ಸಾವಿರ ಕೋಟಿ ರೂ.ಗಳ ಮೊತ್ತವನ್ನು ನಿರೀಕ್ಷಿಸಲಾಗಿದೆ.