Union Budget 2024: ಕೇಂದ್ರ ಬಜೆಟ್‌ ಮೇಲೆ ಹೆಚ್ಚಾಯ್ತು ಭಾರಿ ನಿರೀಕ್ಷೆ! ಹೊಸ ದಾಖಲೆಯತ್ತ ವಿತ್ತ ಸಚಿವೆ

ವಿಜಯವಾಣಿ - 2024-02-01T070056.363
Published on

ಹೊಸದಿಲ್ಲಿ: ಇಂದು 2023–2024ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಸತತ 6ನೇ ಬಾರಿಗೆ ಬಜೆಟ್​ ಮಂಡಿಸುವ ಮುಖೇನ ಹೊಸ ದಾಖಲೆಯತ್ತ ಎದುರುನೋಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಮಧ್ಯಂತರ ಬಜೆಟ್​ನಲ್ಲಿ ಯಾರಿಗೆಲ್ಲಾ ಸಿಹಿ ಹಂಚಲಿದ್ದಾರೆ ಎಂಬ ನಿರೀಕ್ಷೆಗಳು ಸದ್ಯ ಹೆಚ್ಚಿವೆ.

ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಹೊಸ ಸಂಸತ್‌ ಭವನದಲ್ಲಿ ಮಂಡನೆಯಾಗಲಿರುವ ಮೊದಲ ಬಜೆಟ್‌ ಇದಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯ ಕೊನೆ ಹಂತದಲ್ಲಿ ಈ ಮಧ್ಯಂತರ ಬಜೆಟ್ ಮಂಡಿಸಲಾಗುತ್ತಿದೆ. ಈ ಬಾರಿ ಮತದಾರರಿಗೆ ಸಿಹಿ ನೀಡುವುದರ ಜತೆಗೆ ಆರ್ಥಿಕತೆಗೂ ಅನುಕೂಲವಾಗುವ ದೃಷ್ಟಿಯಿಂದ ಮಹತ್ವದ ಘೋಷಣೆಗಳನ್ನು ಪ್ರಕಟಿಸುವ ಸಾಧ್ಯತೆಗಳು ಅಧಿಕವಾಗಿದೆ.

ಈ ಮಧ್ಯಂತರ ಬಜೆಟ್​ ಮಂಡನೆಯಾದ ಬಳಿಕ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಬಜೆಟ್ ಮಂಡನೆಯಾಗುವ ಸಾಧ್ಯತೆಗಳೂ ಸಹ ಹೆಚ್ಚಿದ್ದು, ಈಗಾಗಲೇ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಈ ಬಾರಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಮಹಾ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ಪತಾಕೆ ಹಿಡಿಯುವ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿಯಿದೆ.

ಇನ್ನು ಇಂದಿನ ಮಧ್ಯಂತರ ಬಜೆಟ್​ನಲ್ಲಿ ಎಲ್ಲಾ ರಾಜ್ಯ ಹಾಗೂ ಎಲ್ಲಾ ವರ್ಗದ ಜನರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳಿದ್ದು, ಇತರ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ಬಜೆಟ್​ ಅನ್ನು ಹಣಕಾಸು ಸಚಿವರು ಭಿನ್ನವಾಗಿ ಮಂಡಿಸಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿಯೇ ಇದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net